ಬೆಂಗಳೂರು: ಔರಾದ್ಕರ್ ವರದಿ ಜಾರಿ ಇನ್ನೂ ವಿಳಂಬವಾಗುತ್ತಿದ್ದು, ವೇತನ ಪರಿಷ್ಕರಣೆ ಬದಲು ಶ್ರಮ ವೆಚ್ಚ ಹೆಚ್ಚು ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಿದೆ.
ಔರಾದ್ಕರ್ ವರದಿ ಪಕ್ಕಕ್ಕಿಟ್ಟು ಪೊಲೀಸರಿಗೆ ಶ್ರಮ ವೆಚ್ಚ ಹೆಚ್ಚು ನೀಡುವ ಕುರಿತು ಚಿಂತನೆ ನಡೆಸಲಾಗುತ್ತಿದ್ದು,ಇದರಿಂದ ವೇತನ ಪರಿಷ್ಕರಣೆಯ ನಿರೀಕ್ಷೆಯಲ್ಲಿರುವ ಪೊಲೀಸ್ ಸಿಬ್ಬಂದಿ, ಸಂಬಳ ಹೆಚ್ಚಳಕ್ಕಾಗಿ ಮತ್ತಷ್ಟು ದಿನ ಕಾಯಬೇಕಿದೆ.
ಈ ಕುರಿತು ಸಿಎಂ ಯಡಿಯೂರಪ್ಪ ಗಮನಕ್ಕೆ ತಂದಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ನಿಗದಿತ ಸಮಯಕ್ಕಿಂತ ಹೆಚ್ಚು ಕೆಲಸ ಮಾಡುವ ಪೊಲೀಸರಿಗೆ ತಿಂಗಳಿಗೆ ಒಂದು ಸಾವಿರ ರೂ. ಹಾಗೂ ಈಗಿದ್ದ ಶ್ರಮ ವೆಚ್ಚವನ್ನ 2 ಸಾವಿರ ರೂ. ಮಾಡುವ ಕುರಿತು ಮಾತುಕತೆ ನಡೆಸಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ಶ್ರಮ ವೆಚ್ಚ ಹೆಚ್ಚು ನೀಡುವ ಕುರಿತು ಚಿಂತನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಪ್ರವಾಹ ಸಂತ್ರಸ್ತರಿಗೆ ಹಣ ಹೊಂದಿಸಲು ಸರ್ಕಾರ ಕಸರತ್ತು ನಡೆಸುತ್ತಿದೆ. ಈ ವೇಳೆ ಔರಾದ್ಕರ್ ವರದಿಯೂ ಜಾರಿಗೆ ತಂದರೆ ಹಣ ಹೊಂದಿಸುವುದು ಮತ್ತಷ್ಟು ಕಷ್ಟವಾಗಲಿದೆ ಎನ್ನುವ ಕಾರಣಕ್ಕೆ ಶ್ರಮ ವೆಚ್ಚದ ಕುರಿತು ಸರ್ಕಾರದಿಂದ ಮಾತುಕತೆ ನಡೆಸಲಾಗುತ್ತಿದೆ.
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೆಲ ದಿನಗಳಲ್ಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪೊಲೀಸ್ ಸಿಬ್ಬಂದಿ ವೇತನ ಪರಿಷ್ಕರಣೆ ಸಂಬಂಧ ಔರಾದ್ಕರ್ ವರದಿಯನ್ನು ಜಾರಿಗೊಳಿಸಿ ಆದೇಶ ಹೊರಡಿಸಿದ್ದರು. ನಂತರ ತಕ್ಷಣದಲ್ಲೇ ವರದಿಗೆ ತಡೆ ನೀಡಿದ್ದರು.