ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ):ಗೃಹಿಣಿಯೋರ್ವಳು ತನ್ನ ಸ್ನೇಹಿತರ ಬಳಿ ಚೀಟಿ ಹಾಕಿ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಳು. ಪತ್ನಿಯ ಸಾಲವನ್ನ ತೀರಿಸಿದ ಗಂಡ ನಿತ್ಯ ಆಕೆಗೆ ಬೈಯುತ್ತಿದ್ದ. ಗಂಡನ ಬೈಗುಳಕ್ಕೆ ಬೇಸತ್ತ ಹೆಂಡತಿ ಆತನ ಕೊಲೆಗೆ ಸುಪಾರಿ ಕೊಟ್ಟಿದ್ದಳು. ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಪೊಲೀಸರು ಸೈಯದ್ ನಹೀಮ್, ಮೌಲಾ, ತಸ್ಲೀಮಾ ಮತ್ತು ಮಮತಾ ಎಂಬುವರನ್ನು ಬಂಧಿಸಿದ್ದಾರೆ.
ಪ್ರಕರಣ ಹಿನ್ನೆಲೆ: ಬೆಂಗಳೂರಿನ ಟಿ.ದಾಸರಹಳ್ಳಿಯ ಭುವನೇಶ್ವರ ನಗರದ ನಿವಾಸಿ 44 ವರ್ಷದ ಮಮತಾ ಗಂಡನ ಕೊಲೆಗೆ ಸುಪಾರಿ ಕೊಟ್ಟವಳು. ಈಕೆಯ ಗಂಡ ಮುಕುಂದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯ ಡಿಡಿಪಿಐ ಕಚೇರಿಯಲ್ಲಿ ಎಫ್ಡಿಎ ಕೆಲಸ ಮಾಡುತ್ತಿದ್ದಾರೆ. ಹೆಂಡತಿ ಮಮತಾ ಪಕ್ಕದ ಮನೆಯವರ ಬಳಿ ಚೀಟಿ ಹಾಕಿದ್ದಲ್ಲದೆ ತನ್ನ ಸ್ನೇಹಿತರನ್ನು ಕರೆದು ಚೀಟಿ ಹಾಕಿಸಿದ್ದಳು. ಚೀಟಿ ನಡೆಸುತ್ತಿದ್ದ ಪಕ್ಕದ್ಮನೆಯವಳು ಚೀಟಿ ಹಣದೊಂದಿಗೆ ಪರಾರಿಯಾಗಿದ್ದಾಳೆ.
ಚೀಟಿ ಹಾಕಿದ ಮಮತಾಳ ಸ್ನೇಹಿತರು ಹಣ ಕೇಳಲು ಶುರು ಮಾಡಿದ್ದರು. ಚೀಟಿದಾರರ ಕಿರುಕುಳದಿಂದ ಹೆಂಡತಿಯನ್ನು ಪಾರು ಮಾಡಲು ಗಂಡ ಮುಕುಂದ 25 ಲಕ್ಷ ಹಣ ಕೊಟ್ಟಿದ್ದ. ಆದರೆ ಹೆಂಡತಿಗೆ ದಿನಾ ಈ ವಿಚಾರವಾಗಿ ಬೈಯುತ್ತಿದ್ದ, ಗಂಡನ ಬೈಗುಳದಿಂದ ಬೇಸತ್ತ ಮಮತಾ ತನ್ನ ನೋವನ್ನು ಸ್ನೇಹಿತೆ ತಸ್ಲೀಮಾ ಬಳಿ ಹೇಳಿಕೊಂಡಿದ್ದಳು.