ಬೆಂಗಳೂರು: ಸಹಾಯಕ ಪ್ರಾಧ್ಯಾಪಕ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಬಗೆದಷ್ಟು ಆಳವಾಗುತ್ತಿದೆ. ಪ್ರಕರಣದಲ್ಲಿ ಬಂಧಿತ ಆರೋಪಿ ಸೌಮ್ಯ ಅವರನ್ನು ವಿಚಾರಣೆಗೊಳಪಡಿಸಿದ್ದ ಪೊಲೀಸರು, ಇವರು ನೀಡಿದ ಮಾಹಿತಿ ಮೇರೆಗೆ ಮಲ್ಲೇಶ್ವರಂ ಪೊಲೀಸರು ಮೌಲ್ಯಮಾಪನರಿಜಿಸ್ಟ್ರಾರ್ ಅವರ ವಿಚಾರಣೆ ನಡೆಸಿದ್ದಾರೆ.
ಧಾರವಾಡ ವಿಶ್ವವಿದ್ಯಾಲಯ ಮೌಲ್ಯಮಾಪನ ವಿಭಾಗದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ನಾಗರಾಜ್ ಅವರಿಗೆ ಪ್ರಶ್ನೆಪತ್ರಿಕೆ ತಯಾರಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚನೆ ನೀಡಿತ್ತು. ಇದರಂತೆ ಪ್ರಶ್ನೆ ಪತ್ರಿಕೆ ಸಿದ್ದಪಡಿಸುವಾಗ ಭೂಗೋಳಶಾಸ್ತ್ರದ ಅತಿಥಿ ಉಪನ್ಯಾಸಕಿಯಾಗಿದ್ದ ಸೌಮ್ಯ ಅವರಿಗೆ ಪ್ರಶ್ನೆಗಳನ್ನು ಸಿದ್ಧಪಡಿಸಲು ನಾಗರಾಜ್ ಹೇಳಿದ್ದರಂತೆ. ಇದರಂತೆ 17 ಪ್ರಶ್ನೆಗಳನ್ನ ಸಿದ್ದಪಡಿಸಿ ಸೌಮ್ಯ ನೀಡಿದ್ದರು. ಇದರಲ್ಲಿ 12 ಪ್ರಶ್ನೆಗಳನ್ನು ಉಳಿಸಿಕೊಂಡಿದ್ದರು. ಸದ್ಯ ನಾಗರಾಜ್ ಅವರನ್ನು ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಆರೋಪಿ ಸೌಮ್ಯ ಹಿನ್ನೆಲೆ: ಮೂಲತಃ ಮೈಸೂರಿನ ನಿವಾಸಿಯಾಗಿರುವ ಆರೋಪಿ ಸೌಮ್ಯ, ರಂಗಸ್ವಾಮಿ ಶಿವಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಕೊನೆಯ ಪುತ್ರಿ. 2007-2010ರಲ್ಲಿ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಬಳಿಕ ಭೂಗೋಳ ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದರು. 2013ರಿಂದ 2015ರವರೆಗೆ ಕೆಆರ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.