ಬೆಂಗಳೂರು :ವಿವಾದಗಳಿಂದ ತಮ್ಮ ನಾಯಕತ್ವ ಬೆಳೆಸುವ ಕೆಲಸ ನಡೆಯುತ್ತಿದೆ. ಇದು ಅವರ ಜೀವನಕ್ಕೆ ಉಪಯುಕ್ತವಾದುದಲ್ಲ. ವಿವಾದದ ಮಾತುಗಳು ಸಮಾಜದ ಸಾಮರಸ್ಯ ಕದಡುತ್ತದೆ ಎಂದು ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಯಾರ ಹೆಸರನ್ನೂ ಹೇಳದೆ ಮಾರ್ಮಿಕವಾಗಿ ನುಡಿದಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಸ್ಪೀಕರ್, ಸಚಿವ ಈಶ್ವರಪ್ಪ ಹೇಳಿಕೆ ಕುರಿತು ಪರೋಕ್ಷವಾಗಿ ಪ್ರಸ್ತಾಪಿಸಿ, ನಮಗೆ ಮಾತನಾಡಲು ಸ್ವಾತಂತ್ರ್ಯವಿದೆ. ಆದರೆ, ಮಾತಿನಿಂದ ಸಮಾಜಕ್ಕೆ ಕೆಡುಕಾಗಬಾರದು. ಮಾಧ್ಯಮಗಳು ಇಂತಹ ಸಂಗತಿ ವೈಭವೀಕರಿಸಬಾರದು. ಯಾರೇ ಆಗಿರಲಿ ಮಾತನಾಡುವಾಗ ಗಮನ ಇರಬೇಕು ಎಂದು ಕಿವಿಮಾತು ಹೇಳಿದರು.
ನಾವೆಲ್ಲರೂ ವಿಷ ವರ್ತುಲದಲ್ಲಿದ್ದೇವೆ. ಮೌಲ್ಯಗಳನ್ನು ಎತ್ತಿ ಹಿಡಿಯಲು ಎಲ್ಲರೂ ಜವಾಬ್ದಾರರು. ನಾವು ಅನೇಕ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಆದರೆ, ಇನ್ನೂ ಸಫಲವಾಗುತ್ತಿಲ್ಲ. ವಿಧಾನಸಭೆ ಅಧಿವೇಶನ 10 ದಿನ ನಡೆಯಬೇಕಿತ್ತು.
ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿರುವುದು.. ಆದರೆ, ಕೇವಲ ಎರಡು ದಿನ ನಡೆದಿದೆ. ಐದು ದಿನ ಗೊಂದಲದಲ್ಲಿ ಕಲಾಪ ನಡೆಸಲಾಗಿದೆ. ಇದೆಲ್ಲವೂ ರಾಜ್ಯದ ಜನರ ಗಮನದಲ್ಲಿದೆ. ಎಲ್ಲರೂ ಇದಕ್ಕೆ ಸಾಕ್ಷಿಯಾಗಿದ್ದಾರೆ ಎಂದರು.
ಇದನ್ನೂ ಓದಿ:ಸಹಜ ಸ್ಥಿತಿಯತ್ತ ಶಿವಮೊಗ್ಗ.. ಎಂದಿನಂತೆ ಜನ ಜೀವನ..
ಜಂಟಿ ಸದನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಿದ್ದಾರೆ. ರಾಜ್ಯಪಾಲರ ಭಾಷಣದ ಒಟ್ಟು ಕಾರ್ಯಕ್ರಮ ಚೆನ್ನಾಗಿ ನಡೆದಿದೆ. ಮುಖ್ಯಮಂತ್ರಿಗಳು ವಂದನಾ ನಿರ್ಣಯದ ಮೇಲೆ ಸರ್ಕಾರದ ಉತ್ತರ ಕೊಟ್ಟಿದ್ದಾರೆ.
ಆದರೆ, ಗದ್ದಲ, ಗೊಂದಲದ ನಡುವೆ ಕಲಾಪ ನಡೆದಿದೆ. ಸಂಸದೀಯ ವ್ಯವಸ್ಥೆಯ ಸದನದಲ್ಲಿ ಮಾತಾಡಿ ಸಮಸ್ಯೆ ಬಗೆಹರಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ. ಈ ಬಗ್ಗೆ ಅರಿವು ಜನಪ್ರತಿನಿಧಿಗಳಿಗೆ ಇದೆ. ಆದರೂ ಕಲಾಪ ಹೀಗೆ ನಡೆದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸದನ ಚೆನ್ನಾಗಿ ನಡೆದಿದೆ ಅಂತಾ ಹೇಳಲ್ಲ. ಸದನ ನಡೆಯಬೇಕು ನಡೆದಿದೆ ಅಷ್ಟೇ.. ಯಾವುದೇ ಸಮಸ್ಯೆ ಇದ್ದರೆ ಬಗೆಹರಿಸಿಕೊಳ್ಳಬೇಕು. ಸದನದೊಳಗೆ ಬಗೆಹರಿಸಿಕೊಳ್ಳುವ ಅವಕಾಶವೂ ಇತ್ತು. ಸದಸ್ಯರಿಗೆಲ್ಲರಿಗೂ ಇದರ ಅರಿವಿತ್ತು. ಐದಾರು ಬಾರಿ ಸಂಧಾನ ಸಭೆಯನ್ನೂ ಮಾಡಿದ್ದೆ, ಕಲಾಪ ಉತ್ತಮವಾಗಿ ನಡೆಸುವುದಕ್ಕೆ ಪ್ರಯತ್ನ ಮಾಡಿದ್ದೇನೆ. ಆದರೆ, ಕಲಾಪವು ಸೌಹಾರ್ದವಾಗಿ ಆಗಲಿಲ್ಲ ಎಂದರು.
ಇದನ್ನೂ ಓದಿ:'ಘಟನೆ ಬಳಿಕ ಸಾಂತ್ವನ ಹೇಳುವ ದುಸ್ಥಿತಿ ಬೇಡ, ಮುಂಜಾಗೃತಾ ಕ್ರಮದ ಅಗತ್ಯವಿದೆ'
ರಾಜ್ಯ ವಿಧಾನಸಭೆಗೆ ತನ್ನದೇ ಆದ ಘನತೆಯಿದೆ. ಮುಂದಿನ ದಿನಗಳಲ್ಲಾದರೂ ಸಹಕಾರ ಕೊಡಬೇಕು. ಅನಿವಾರ್ಯವಾದರೆ ಕ್ರಮ ಜರುಗಿಸಲು ಅವಕಾಶವಿದೆ. ಕಲಾಪದಲ್ಲಿ ಭಾಗಿಯಾಗಲು ಜೆಡಿಎಸ್, ಆಡಳಿತ ಪಕ್ಷ ಸಿದ್ಧವಿತ್ತು. ಆದರೆ, ಕಾಂಗ್ರೆಸ್ ಧರಣಿಯಿಂದ ಕಲಾಪ ಆಗಲಿಲ್ಲ. ಹೋರಾಟ ಎಲ್ಲಿ ಬೇಕಾದರೂ ಮಾಡಬಹುದು. ಆದರೆ, ಸದನದೊಳಗೆ ಸರಿಯಾಗಿ ನಡೆದುಕೊಳ್ಳದಿದ್ದರೆ ಕಷ್ಟ ಎಂದು ಸ್ಫೀಕರ್ ನುಡಿದರು.
ಚುನಾವಣಾ ಸುಧಾರಣೆ ವಿಚಾರವಾಗಿ ಎರಡು ದಿನಗಳ ಕಾಲ ಚರ್ಚೆ ಆಗಬೇಕಿತ್ತು. ಆದರೆ, ಸದನವೇ ನಡೆಯದೇ ಇರುವುದರಿಂದ ಚರ್ಚೆ ಆಗಿಲ್ಲ. ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಈ ವಿಚಾರ ಚರ್ಚೆಗೆ ಕೈಗೆತ್ತಿಕೊಳ್ಳುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ:ಮೈಸೂರು : ಪ್ರೀತಿಸಿ ಕೆಲ ತಿಂಗಳ ಹಿಂದೆಯೇ ಮನೆ ತೊರೆದಿದ್ದ ಯುವ ಪ್ರೇಮಿಗಳು ಆತ್ಮಹತ್ಯೆ
ಸಚಿವರು, ಶಾಸಕರ ವೇತನ ಹೆಚ್ಚಳ ವಿಚಾರಕ್ಕೆ ಪ್ರತಿಕ್ರಿಯಿಸಿದ ಸ್ಪೀಕರ್, ಕಳೆದ ಆರೇಳು ವರ್ಷಗಳಿಂದ ಭತ್ಯೆ ಹೆಚ್ಚಿರಲಿಲ್ಲ. ಹೆಚ್ಚಳದ ಬಗ್ಗೆ ಸದಸ್ಯರ ಆಪೇಕ್ಷೆಯಿತ್ತು. ಹಾಗಾಗಿ, ನಿನ್ನೆ ಸರ್ಕಾರ ಬಿಲ್ ತಂದಿದೆ ಎಂದರು.
ಜನರಿಗೆ ಹಕ್ಕುಚ್ಯುತಿ ಮಂಡಿಸಲು ಆಗಲ್ಲ. ಸದಸ್ಯರ ಹಕ್ಕು ಚ್ಯುತಿಯಾದರೆ ನಾನು ಮಾಡಬಹುದು. ಜನರ ಭಾವನೆಗಳನ್ನು ವ್ಯಕ್ತಪಡಿಸುವುದು ಎಲ್ಲರ ಕರ್ತವ್ಯ. ಆದರೆ, ವ್ಯಕ್ತಪಡಿಸುವ ಕೆಲಸ ಆಗುತ್ತಿಲ್ಲ. ರಾಜ್ಯದ ಜನರು ಎಲ್ಲವನ್ನೂ ನೋಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ಕೊಡ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.