ಬೆಂಗಳೂರು :ರಾಜ್ಯ ವಿಧಾನಸಭೆಯಿಂದ ವಿಧಾನಪರಿಷತ್‍ನ ಏಳು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಳೆ ಕಡೆಯ ದಿನವಾಗಿದೆ. ಇನ್ನು ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ನಾಳೆ ಅಧಿಸೂಚನೆ ಹೊರ ಬೀಳಲಿದ್ದು, ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದ್ದರೂ ಎರಡೂ ರಾಷ್ಟ್ರೀಯ ಪಕ್ಷಗಳು ಹಾಗೂ ಜೆಡಿಎಸ್ ಕಣಕ್ಕಿಳಿಸಲಿರುವ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೂ ಅಂತಿಮಗೊಳಿಸಿಲ್ಲ.
ಇಂದು ಸಂಜೆ ವೇಳೆಗೆ ಮೂರು ಪಕ್ಷಗಳು ತಮ್ಮ ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಕೊನೆ ಗಳಿಗೆಯಲ್ಲಿ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಮೇ 17ರಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದರೂ ಇದುವರೆಗೂ ಯಾವೊಬ್ಬ ಅಭ್ಯರ್ಥಿಯೂ ನಾಮಪತ್ರ ಸಲ್ಲಿಸಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಹೈಕಮಾಂಡ್ ವಿಧಾನಪರಿಷತ್ ಚುನಾವಣೆ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಬೇಕಾಗಿದೆ.
ಜೆಡಿಎಸ್‍ನಲ್ಲಿ ಅಭ್ಯರ್ಥಿಗಳ ಆಯ್ಕೆ ಅಧಿಕಾರವನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ನೀಡಲಾಗಿದೆ. ಇಂದು ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಿ ಪ್ರಕಟಿಸುವ ಸಾಧ್ಯತೆ ಇದೆ. ಜೆಡಿಎಸ್‍ನಿಂದ ಕಣಕ್ಕಿಳಿಯಲು ವಿಧಾನಪರಿಷತ್ ಮಾಜಿ ಸದಸ್ಯ ಟಿ ಎ ಶರವಣ ಹಾಗೂ ವೀರೇಂದ್ರ ಅವರು ಪ್ರಬಲ ಸ್ಪರ್ಧಿಗಳಾಗಿದ್ದಾರೆ. ಈ ಬಾರಿ ಮಧ್ಯ ಕರ್ನಾಟಕ ಭಾಗಕ್ಕೆ ಅವಕಾಶ ಮಾಡಿಕೊಡಬೇಕು ಎಂಬ ಲೆಕ್ಕಾಚಾರ ಮಾಡಲಾಗಿದೆ. ಇದಕ್ಕೆ ಒತ್ತು ನೀಡಿದರೆ ವೀರೇಂದ್ರ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.
ಇನ್ನು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಅಂತಿಮಗೊಳಿಸಿ ಸ್ಪರ್ಧಾಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ ಅಂಗಳಕ್ಕೆ ರವಾನಿಸಲಾಗಿದ್ದು, ಇಂದು ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ. ವಿಧಾನಸಭೆಯಲ್ಲಿ ಹೊಂದಿರುವ ಶಾಸಕರ ಸಂಖ್ಯೆಯ ಆಧಾರದ ಮೇಲೆ ಬಿಜೆಪಿ ನಾಲ್ಕು, ಕಾಂಗ್ರೆಸ್ ಎರಡು ಹಾಗೂ ಜೆಡಿಎಸ್ ಒಂದು ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ರಾಷ್ಟ್ರೀಯ ಪಕ್ಷಗಳು ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಮತದಾನ ನಡೆಯುವುದು ಅನಿವಾರ್ಯವಾಗಲಿದೆ. ಇಲ್ಲದಿದ್ದರೆ ಅವಿರೋಧ ಆಯ್ಕೆಯಾಗುವ ಸಾಧ್ಯತೆಗಳಿವೆ.
ವಿಧಾನಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ಲೇಹರ್‌ಸಿಂಗ್, ಆರ್.ಬಿ.ತಿಮ್ಮಾಪುರ, ಅಲ್ಲಂವೀರಭದ್ರಪ್ಪ, ಹೆಚ್ ಎಂ ರಮೇಶ್‍ಗೌಡ, ವೀಣಾ ಅಚ್ಚಯ್ಯ, ಕೆ.ವಿ.ನಾರಾಯಣಸ್ವಾಮಿ ಅವರು ಸೇರಿ ಜೂನ್ 14ರಂದು ನಿವೃತ್ತಿಯಾಗುವ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇನ್ನು ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ 2, ಕಾಂಗ್ರೆಸ್ 1 ಸ್ಥಾನವನ್ನು ಸುಲಭವಾಗಿ ಗೆಲ್ಲಬಹುದಾಗಿದೆ. ಜೆಡಿಎಸ್ ಒಂದು ಸ್ಥಾನ ಗೆಲ್ಲಬೇಕಾದರೆ ರಾಷ್ಟ್ರೀಯ ಪಕ್ಷಗಳ ಬೆಂಬಲ ಪಡೆಯುವುದು ಅನಿವಾರ್ಯವಾಗಲಿದೆ.
ನಿರ್ಮಲಾ ಸೀತರಾಮನ್ ಸ್ಪರ್ಧೆ ಸಾಧ್ಯತೆ :ನಾಲ್ಕು ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದ್ದು, ನಾಳೆಯಿಂದ ಮೇ 31ರವರೆಗೂ ನಾಮಪತ್ರ ಸಲ್ಲಿಸಲು ಅವಕಾಶವಿದೆ. ಬಿಜೆಪಿಯಿಂದ ರಾಜ್ಯಸಭೆ ಸದಸ್ಯರಾದ ಕೆ.ಸಿ.ರಾಮಮೂರ್ತಿ, ನಿರ್ಮಲಾ ಸೀತಾರಮನ್ ಅವರನ್ನು ಮತ್ತೆ ಈ ಬಾರಿ ಸ್ಪರ್ಧೆಗಿಳಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಆದರೆ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿ ಕರ್ನಾಟಕ ಬದಲಿಗೆ ಉತ್ತರ ಪ್ರದೇಶದಿಂದ ಸ್ಪರ್ಧೆಗಿಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗೇನಾದರೂ ಒಂದು ವೇಳೆ ಉತ್ತರ ಪ್ರದೇಶದಿಂದ ನಿರ್ಮಲಾ ಸೀತಾರಾಮನ್ ಸ್ಪರ್ಧಿಸಿದರೆ ರಾಜ್ಯದಿಂದ ಹೊಸಬರಿಗೆ ಅವಕಾಶ ಮಾಡಿಕೊಡಲು ಬಿಜೆಪಿ ಉದ್ದೇಶಿಸಿದೆ. ನಿರ್ಮಲ್ ಕುಮಾರ್ ಸುರಾನಾ ಅವರಿಗೆ ಅವಕಾಶ ದೊರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದ್ದರೂ ಅಧಿಕೃತವಾಗಿ ಇನ್ನೂ ಯಾರ ಹೆಸರನ್ನು ಪಕ್ಷ ಪ್ರಕಟಿಸಿಲ್ಲ.