ಬೆಂಗಳೂರು :ತಮಟೆ ಬಡಿಯೋದನ್ನು ನಿಲ್ಲಿಸಿದ್ರು ಎಂಬ ಕಾರಣಕ್ಕೆ ಪುಂಡರ ಗುಂಪೊಂದು ದೇವಾಲಯದ ಅರ್ಚಕರು, ತಮಟೆಯವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ತಾವರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಕನ್ನಲ್ಲಿಯ ಶ್ರೀ ಶನೇಶ್ವರಸ್ವಾಮಿ ದೇವಾಲಯದ ಬಳಿ ತಡರಾತ್ರಿ ನಡೆದಿದೆ. ಪುಂಡರ ಹಾವಳಿಗೆ ದೇವಸ್ಥಾನದ ಅರ್ಚಕ ಶಶಿಕುಮಾರ್, ಬಸವರಾಜ್ ಸೇರಿ ನಾಲ್ಕೈದು ಜನರು ಗಾಯಗೊಂಡಿದ್ದಾರೆ.
ತಮಟೆ ಬಡಿಯೋದು ನಿಲ್ಲಿಸಿದ್ದಕ್ಕೆ ಮಚ್ಚಿನೇಟು! ನಿನ್ನೆಯಿಂದ ಕನ್ನಲ್ಲಿಯ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದ ಜಾತ್ರೆ ಆರಂಭವಾಗಿದೆ. ರಾತ್ರಿ ವೇಳೆ ಅಲ್ಲಿಗೆ ಬಂದಿದ್ದ 8 ಯುವಕರ ಗುಂಪು ತಮಟೆ ಹೊಡೆಯುತ್ತಿದ್ದವರನ್ನು ಬೆದರಿಸಿಕೊಂಡು ಡ್ಯಾನ್ಸ್ ಆರಂಭಿಸಿದೆ.
ಈ ವೇಳೆ ತಮಟೆ ಬಡಿಯೋದು ನಿಲ್ಲಿಸಿ, ಸ್ಥಳೀಯರು ಮತ್ತು ದೇವಸ್ಥಾನದವರು 'ಯಾರು ನೀವು ?' ಎಂದು ಪ್ರಶ್ನಿಸಿದಾಗ ಅಲ್ಲಿಂದ ಜಾಗ ಖಾಲಿ ಮಾಡಿದ್ದ ಗ್ಯಾಂಗ್ ಮತ್ತೆ ನಡುರಾತ್ರಿ ಲಾಂಗು, ಮಚ್ಚು ಸಮೇತ ಬಂದು ಏಕಾಏಕಿ ಅರ್ಚಕರು ಮತ್ತು ದೇವಾಲಯದ ಸಿಬ್ಬಂದಿ ಮೇಲೆ ಮನಬಂದಂತೆ ಹಲ್ಲೆ ಮಾಡಿದೆ.
ಇದನ್ನೂ ಓದಿ:ಶ್ರೀರಾಮ ಶೋಭಾಯಾತ್ರೆಗೆ ಚಾಲನೆ : ಹಿಂದೂಗಳಿಗೆ ಜ್ಯೂಸ್ ನೀಡಿದ ಮುಸ್ಲಿಂ ಬಾಂಧವರು
ಸದ್ಯ ಗಾಯಗೊಂಡವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಾವರೆಕೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.