ದೊಡ್ಡಬಳ್ಳಾಪುರ: ಮಧ್ಯರಾತ್ರಿ ಹೆದ್ದಾರಿ ಬದಿಯ ಮನೆಗೆ ನುಗ್ಗಿ ಯುವಕನ ಹತ್ಯೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಪೊಲೀಸರು ಗುಂಡು ಹೊಡೆದು ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಆ.16ರ ಮಧ್ಯರಾತ್ರಿ ತಾಲೂಕಿನ ಹುಲಿಕುಂಟೆಯಲ್ಲಿ ಯುವಕನ ಹತ್ಯೆಯಾಗಿತ್ತು. ನೀರು ಕೇಳುವ ನೆಪದಲ್ಲಿ ಹೆದ್ದಾರಿ ಬದಿಯ ಮನೆಗೆ ನುಗ್ಗಿದ್ದ ಹಂತಕರು, ಮಾರಕಾಸ್ತ್ರಗಳಿಂದ ಕೊಚ್ಚಿ ಮಂಜುನಾಥ್ (22) ಎಂಬ ಯುವಕನ ಕೊಲೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ ಪೊಲೀಸರು ಪ್ರಕರಣ ಭೇದಿಸಲು ತಲೆಕೆಡಿಸಿಕೊಂಡಿದ್ದರು. ಇದೇ ವೇಳೆ ದೊಡ್ಡಬಳ್ಳಾಪುರ ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಆರೋಪಿಗಳು ತಂಗಿರುವ ಸುಳಿವು ಪೊಲೀಸರಿಗೆ ಸಿಕ್ಕಿತ್ತು. ಸರ್ಕಲ್ ಇನ್ಸ್ಪೆಕ್ಟರ್ ರಾಘವ ಎಸ್. ಗೌಡ ಹಾಗೂ ದೊಡ್ಡಬೆಳವಂಗಲ ಸಬ್ ಇನ್ಸ್ಪೆಕ್ಟರ್ ಮಂಜೇಗೌಡ ನೇತೃತ್ವದ ಪೊಲೀಸರ ತಂಡ ಕೆಸ್ತೂರು ಬಳಿ ಆರೋಪಿಗಳನ್ನು ಬಂಧಿಸಲು ತೆರಳಿದ್ದರು.
ಈ ವೇಳೆ ರಾಜನಕುಂಟೆ ಸಬ್ ಇನ್ಸ್ಪೆಕ್ಟರ್ ಶಂಕರಪ್ಪ ಮತ್ತು ದೊಡ್ಡಬೆಳವಂಗಲ ಪೊಲೀಸ್ ಕಾನ್ಸ್ಟೇಬಲ್ ಹುಸೇನ್ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು. ಸರ್ಕಲ್ ಇನ್ಸ್ಪೆಕ್ಟರ್ ರಾಘವ ಎಸ್. ಗೌಡ ಆರೋಪಿಗಳಾದ ಹೇಮಂತ್, ಸೋನು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಸದ್ಯ ಗಾಯಗೊಂಡ ಆರೋಪಿಗಳನ್ನು ಹಾಗೂ ಪೊಲೀಸ್ ಸಿಬ್ಬಂದಿಯನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.