ಆನೇಕಲ್: ವಸತಿ ಸಮುಚ್ಚಯ ವಾಸಿಗಳು ಮೂಲಭೂತ ಸೌಲಭ್ಯ ಕೊರತೆ ಕುರಿತು ಚರ್ಚಿಸುವ ಸಂದರ್ಭದಲ್ಲಿ ಏಕಾಏಕಿ ಸ್ಥಳಕ್ಕೆ ಬಂದ ಸೂರ್ಯನಗರ ಬಡಾವಣೆಯ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ದೊಣ್ಣೆಯಿಂದ ನಿವಾಸಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಂದಾಪುರ-ಆನೇಕಲ್ ಮುಖ್ಯರಸ್ತೆಯಲ್ಲಿ ಕರ್ನಾಟಕ ಗೃಹ ಮಂಡಳಿ ನಿರ್ಮಿಸಿರುವ ಸೂರ್ಯನಗರ ಬಡಾವಣೆಯ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಇಗ್ಗಲೂರು ಮುನಿರಾಜು, ನಿವಾಸಿ ಷಣ್ಮುಗಂ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ಹಲ್ಲೆ ನಡೆಸಿರುವ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೂರ್ಯನಗರ ಸರ್ಕಾರಿ ಸಮುಚ್ಚಯದ ಎಲ್-1, ಎಲ್-2 ನಿವಾಸಿಗಳು ಸೌಕರ್ಯಗಳ ಕುರಿತು ಸಮಾನ ಮನಸ್ಕರೊಡನೆ ಸಮಾಲೋಚನೆ ನಡೆಸುತ್ತಿರುವ ಸಂದರ್ಭದಲ್ಲಿ ಬಡಾವಣೆ ಅಧ್ಯಕ್ಷ ಮುನಿರಾಜು ಧಮ್ಕಿ ಹಾಕಿದ್ದರು ಎನ್ನಲಾಗಿದೆ. ಪ್ರತಿ ತಿಂಗಳು ಮೂರು ಲಕ್ಷಕ್ಕೂ ಹೆಚ್ಚು ಹಣ ಕಲೆಕ್ಷನ್ ಮಾಡಿ ಅಸೋಷಿಯೇಷನ್ ಸಮರ್ಪಕ ಮೂಲಭೂತ ಸೌಕರ್ಯ ನೀಡುತ್ತಿಲ್ಲ ಎಂಬ ಆರೋಪ ಅಧ್ಯಕ್ಷರ ವಿರುದ್ಧ ಕೇಳಿ ಬಂದ ಹಿನ್ನೆಲೆ ಚರ್ಚೆ ನಡೆಯುತ್ತಿದ್ದ ಸಂದರ್ಭ ಘಟನೆ ನಡೆದಿದೆ. ಸೂರ್ಯನಗರ ಆಲದಮರದ ಮೈದಾನದಲ್ಲಿ ಭಾನುವಾರ ಘಟನೆ ನಡೆದಿತ್ತು. ಹಲ್ಲೆ ನಡೆಸಿರುವ ಬಗ್ಗೆ ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಬಡಾವಣೆ ನಿವಾಸಿಗಳಿಂದ ದೂರು ದಾಖಲಾಗಿದೆ.