ಬೆಂಗಳೂರು: ನಗರದಲ್ಲಿ ಕೊರೊನಾದಿಂದ ಅನೇಕ ಜನರು ಸಾವನ್ನಪ್ಪಿದ್ದಾರೆ. ಇನ್ನು ಮೃತರ ಸಂಖ್ಯೆ ಹೆಚ್ಚಾದಂತೆ ನಗರದಲ್ಲಿ ರುದ್ರಭೂಮಿಗಳ ಕೊರತೆ ಉಂಟಾಗಿದೆ. ಈ ಹಿನ್ನಲೆ, ತಾತ್ಕಾಲಿಕ ಸಾಮೂಹಿಕ ಚಿತಾಗಾರಗಳನ್ನು ಜಿಲ್ಲಾಡಳಿತ ನಿರ್ಮಾಣ ಮಾಡಿತ್ತು. ನಗರದ ತಾವರೆಕೆರೆಯ ಕುರುಬರಹಳ್ಳಿ ಗ್ರಾಮದಲ್ಲಿಯೂ ತಾತ್ಕಾಲಿಕ ಚಿತಾಗಾರ ನಿರ್ಮಾಣ ಮಾಡಲಾಗಿದ್ದು, 1600 ಜನರ ಮೃತದೇಹಗಳನ್ನು ಸುಡಲಾಗಿದೆ.
ಚಿತಾಭಸ್ಮ ವಿಸರ್ಜನೆಯಿಲ್ಲ!
ಸಂಪ್ರದಾಯದಂತೆ ಮರುದಿನ ಬಂದು ಚಿತಾಭಸ್ಮ ಪಡೆದು ಹರಿಯೋ ನೀರಿಗೆ ಬಿಡಲಾಗುತ್ತದೆ. ಇದರಿಂದ ಮೃತಪಟ್ಟವರ ಆತ್ಮಕ್ಕೆ ಶಾಂತಿಸಿಗುವ ನಂಬಿಕೆಯೂ ಇದೆ. ಆದರೆ ಕ್ರೂರಿ ಕೊರೊನಾಕ್ಕೆ ಹೆದರಿಯೋ, ಇನ್ಯಾವುದೋ ಕಾರಣಕ್ಕೋ ನೂರಾರು ಜನರ ಅಸ್ಥಿ ಚಿತಾಗಾರಗಳಲ್ಲೇ ಹಾಗೇ ಉಳಿದಿವೆ.
ಚಿತಾಗಾರದಲ್ಲೇ ಉಳಿದ ಕೋವಿಡ್ ಮೃತದೇಹಗಳ ಚಿತಾಭಸ್ಮ.. ಈ ತಾವರೆಕೆರೆ ಚಿತಾಗಾರದಿಂದ ಇನ್ನೂ 154 ಜನರ ಚಿತಾಭಸ್ಮವನ್ನು ಅವರ ಕುಟುಂಬಸ್ಥರು ತೆಗೆದುಕೊಂಡು ಹೋಗದೇ ಹಾಗೇ ಉಳಿದುಬಿಟ್ಟಿದೆ. ಗಿಡ್ಡೇನಹಳ್ಳಿ ಚಿತಾಗಾರದಿಂದ 114 ಜನರ ಚಿತಾಭಸ್ಮ ಹಾಗೇ ಉಳಿದುಬಿಟ್ಟಿದೆ. ಇನ್ನು ಚಿತಾಗಾರದ ಸಿಬ್ಬಂದಿಗಳೇ ಕುಟುಂಬಸ್ಥರಿಗೆ ಕರೆ ಮಾಡಿ ಚಿತಾಭಸ್ಮ ತೆಗೆದುಕೊಂಡು ಹೋಗುವಂತೆ ಹೇಳಿದ್ರೂ, ನಾವು ತುಂಬಾ ದೂರದಲ್ಲಿದ್ದೇವೆ, ಬರಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಇನ್ನು ಕೆಲವರು ಚಿತಾಭಸ್ಮ ತೆಗೆದುಕೊಂಡು ಹೋಗುವುದು ನಮ್ಮ ಸಂಪ್ರದಾಯದಲ್ಲಿ ಇಲ್ಲ ಎಂದು ಕಾರಣ ಹೇಳುತ್ತಿದ್ದಾರಂತೆ. ಇನ್ನೇಷ್ಟೋ ಅನಾಥ ಶವಗಳ ಚಿತಾಭಸ್ಮ ಉಳಿದು ಬಿಟ್ಟಿದೆ.
ಚಿತಾಗಾರದ ಸಿಬ್ಬಂದಿಯಿಂದಲೇ ಚಿತಾಭಸ್ಮ ವಿಸರ್ಜನೆ!
ಹೀಗಾಗಿ ಚಿತಾಗಾರದ ಸಿಬ್ಬಂದಿಗಳೇ ಬೂದಿಯನ್ನು ತೆಗೆದಿಟ್ಟು, ಸರ್ಕಾರದ ವತಿಯಿಂದಲೇ ವಿಸರ್ಜಿಸಲು ತೀರ್ಮಾನಿಸಿದ್ದಾರೆ. ತಾವರೆಕೆರೆಯಲ್ಲಿ 41 ಚಿತೆಗಳಿದ್ದು, ಒಂದೇ ಬಾರಿ 41 ಶವಗಳನ್ನು ಸುಡಬಹುದಾಗಿದೆ. ನಾಲ್ಕು ಗಂಟೆಗಳ ಬಳಿಕ ಸಂಪೂರ್ಣ ತಣ್ಣಗಾದ ನಂತರ ಮಡಕೆಗಳಿಗೆ ದಿನಾಂಕ ಹಾಗೂ ನಂಬರ್ ಹಾಕಿ ಆ ಮಡಕೆಗಳಲ್ಲಿ ಚಿತಾಭಸ್ಮ ಇಡಲಾಗುತ್ತಿದೆ. ಮರುದಿನ ಬಂದು ಅಥವಾ ಸಂಜೆವರೆಗೆ ಚಿತಾಗಾರದಲ್ಲೇ ಉಳಿದು ಚಿತಾಭಸ್ಮವನ್ನು ನೇರವಾಗಿ ಹರಿಯೋ ನೀರಿಗೆ ಬಿಡಲಾಗುತ್ತಿದೆ.
268 ಮಂದಿ ಇನ್ನೂ ಚಿತಾಭಸ್ಮ ತೆಗೆದುಕೊಂಡೇ ಹೋಗಿಲ್ಲ. ಸದ್ಯ ಮೃತದೇಹಗಳ ಸಂಖ್ಯೆಯೂ ಕಡಿಮೆಯಾಗಿದ್ದು, ದಿನವೊಂದಕ್ಕೆ 8-9 ಮೃತದೇಹಗಳು ಬರುತ್ತಿವೆ ಎಂದು ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.