ಬೆಂಗಳೂರು: ರಾಜ್ಯ ಮಟ್ಟದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಫೋನ್ ಟ್ಯಾಪಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ಅರವಿಂದ್ ಬೆಲ್ಲದ್ ತಮಗೆ ಬಂದಿದ್ದ ಕರೆಯ ಮೊಬೈಲ್ ನಂಬರ್ ನೀಡಲು ಹಿಂದೆ ಸರಿಯುತ್ತಿದ್ದಾರೆ ಎಂಬ ಗುಮಾನಿ ವ್ಯಕ್ತವಾಗಿದೆ.
ಯುವರಾಜ್ ಸ್ವಾಮಿ ಹೆಸರಿನಲ್ಲಿ ಕರೆ ಬಂದಿದೆ ಎಂದು ಆರೋಪಿಸಿರುವ ಅರವಿಂದ್ ಬೆಲ್ಲದ್ ಅವರಿಗೆ ಕರೆ ಬಂದಿರುವ ಮೊಬೈಲ್ ನಂಬರ್ ಅನ್ನು ಇನ್ನೊಂದು ವಾರದಲ್ಲಿ ನೀಡುವಂತೆ ಸೂಚಿಸಲಾಗಿದೆ. ಒಂದು ವೇಳೆ ಮಾಹಿತಿ ನೀಡದಿದ್ದರೆ ಪ್ರಕರಣದ ವಿಚಾರಣೆ ಮುಕ್ತಾಯಗೊಳಿಸಲು ತನಿಖಾಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ತನಿಖಾಧಿಕಾರಿಗಳ ಮುಂದೆ ಈಗಾಗಲೇ ಎರಡನೇ ಬಾರಿ ವಿಚಾರಣೆ ಹಾಜರಾಗಿದ್ದ ಬೆಲ್ಲದ್, ಯುವರಾಜ್ ಹೆಸರಿನಲ್ಲಿ ಕರೆ ಬಂದಿದೆ ಎಂದು ಹೈದರಾಬಾದ್ ಮೂಲದ ಪರಿಚಯಸ್ಥ ಅರ್ಚಕರಿಗೆ ಮೊಬೈಲ್ ನಂಬರ್ ನೀಡಿ ಗೊಂದಲ ಮೂಡಿಸಿದ್ದರು. ಈ ಬಗ್ಗೆ ತನಿಖೆ ನಡೆಸಿದ್ದ ಪೊಲೀಸರಿಗೆ ಶಾಸಕರಿಗೆ ಫೋನ್ ಮಾಡದಿರುವುದನ್ನು ಕಂಡುಕೊಂಡಿದ್ದರು. ಕಾಲ್ ಮಾಡಿದ್ದು ನಿಜ ಎಂದು ಹೇಳುವ ಶಾಸಕರು, ನಂಬರ್ ಕೇಳಿದರೆ ಕೊಡುತ್ತೇನೆ ಎಂದು ಹೇಳಿ ಇದುವರೆಗೂ ಯಾವುದೇ ರೀತಿಯ ಮಾಹಿತಿ ನೀಡಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಪೋನ್ ಟ್ಯಾಪಿಂಗ್ ಕೇಸ್: ವಿಚಾರಣೆಗೆ ಹಾಜರಾಗದ ಶಾಸಕ ಅರವಿಂದ ಬೆಲ್ಲದ
ಪ್ರಕರಣ ಹಿನ್ನೆಲೆ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ್ ಬೆಲ್ಲದ್ ಕೆಲ ದಿನಗಳ ಹಿಂದೆ ಆರೋಪಿ ಯುವರಾಜ್ ಸ್ವಾಮಿ ಹೆಸರಿನಲ್ಲಿ ಕರೆ ಬಂದಿದೆ. ಈ ಬೆಳವಣಿಗೆಗಳನ್ನು ಗಮನಿಸಿದ್ರೆ ನನ್ನ ವಿರುದ್ಧ ಷಡ್ಯಂತ್ರ ರೂಪಿಸಿದ್ದು, ಈ ನಿಟ್ಟಿನಲ್ಲಿ ಫೋನ್ ಟ್ಯಾಪಿಂಗ್ ಆಗಿದೆ ಎಂದು ಅನುಮಾನ ವ್ಯಕ್ತಪಡಿಸಿ, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಪತ್ರ ಬರೆದು ಹಾಗೂ ಗೃಹ ಸಚಿವರಿಗೆ ದೂರು ನೀಡಿದ್ದರು. ಬೆಲ್ಲದ್ ಅವರ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರ ಪೊಲೀಸ್ ಆಯುಕ್ತ ಕಮಲ್‌ಪಂತ್ ತನಿಖೆ ನಡೆಸುವಂತೆ ಸೂಚನೆ ನೀಡಿದ್ದರು.