ಬೆಂಗಳೂರು: ಭಾರೀ ಜಿದ್ದಾಜಿದ್ದಿನ ಶಿವಾಜಿನಗರ ಕ್ಷೇತ್ರದ ಮತ ಎಣಿಕೆ ಮಂದಗತಿಯಲ್ಲಿ ಸಾಗಿದೆ. ಒಟ್ಟು 14 ಸುತ್ತುಗಳ ಮತ ಎಣಿಕೆ ನಡೆಯಬೇಕಿದೆ. ಅಧಿಕೃತವಾಗಿ ಏಳು ಸುತ್ತು ಮಾತ್ರ ಮತ ಎಣಿಕೆ ಮುಕ್ತಾಯವಾಗಿದೆ. ಒಟ್ಟು ಮತದಾನ ಮಾಡಿದವರ ಸಂಖ್ಯೆ 93 ಸಾವಿರ ಆಗಿದ್ದು ಇನ್ನೂ 40 ಸಾವಿರಕ್ಕೂ ಹೆಚ್ಚು ಮತಗಳ ಎಣಿಕೆಯಾಗಬೇಕಿದೆ. ಕಡೆಯ ಸುತ್ತುಗಳಲ್ಲಿ ಸಂಪಂಗಿರಾಮನಗರ ಹಾಗೂ ಹಲಸೂರು ವಾರ್ಡ್ ಗಳ ಮತ ಎಣಿಕೆ ನಡೆಯಲಿರುವ ಹಿನ್ನೆಲೆ ಈ ಭಾಗದಲ್ಲಿ ಬಿಜೆಪಿಗೆ ಕನಿಷ್ಠ ಹತ್ತು ಸಾವಿರ ಮತಗಳ ಮುನ್ನಡೆ ಲಭಿಸಲಿದೆ ಎಂಬ ಮಾಹಿತಿ ಇದೆ.
ಅರ್ಧ ಎಣಿಕೆಗೇ ಗೆಲುವು ನಿಶ್ಚಯಿಸಿಕೊಂಡ ರಿಜ್ವಾನ್: ಬೆಂಬಲಿಗರಿಂದ ಸಂಭ್ರಮಾಚರಣೆ
ಕಾಂಗ್ರೆಸ್ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ಶಿವಾಜಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಭರ್ಜರಿ ಮುನ್ನಡೆ ಕಾಯ್ದುಕೊಂಡಿದ್ದು ಗೆಲುವಿನ ಸನಿಹ ಮುನ್ನುಗ್ಗುತ್ತಿದ್ದಾರೆ. ಏಳು ಸುತ್ತಿನ ಮತ ಎಣಿಕೆ ಮುಕ್ತಾಯಕ್ಕೆ ಕಾಂಗ್ರೆಸ್ ಅಭ್ಯರ್ಥಿ 156328 ಮತಗಳ ಮುನ್ನಡೆ ಗಳಿಸಿದ್ದು, ಮತ ಎಣಿಕೆ ಕೇಂದ್ರದ ಬಳಿ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆರಂಭಿಸಿದ್ದಾರೆ.
ಒಂಬತ್ತು ಸುತ್ತುಗಳ ಮತ ಎಣಿಕೆ ಕಾರ್ಯ ಮುಕ್ತಾಯದವರೆಗೂ ಮುನ್ನಡೆಯನ್ನು ಅಧಿಕೃತ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. 9ನೇ ಸುತ್ತಿನವರೆಗೂ ರಿಜ್ವಾನ್ ತಮ್ಮ ಮುನ್ನಡೆಯನ್ನು ಕಾಯ್ದುಕೊಂಡಿದ್ದರೆ ಮಾತ್ರ ಗೆದ್ದೇ ಬಿಡುತ್ತಾರೆ ಎಂಬ ವಿಶ್ವಾಸ ಹೊಂದಬಹುದಾಗಿದೆ. ಈಗಾಗಲೇ ಮುನ್ನಡೆ ಕಾಯ್ದುಕೊಂಡಿರುವ ರಿಜ್ವಾನ್ ಪರ ಘೋಷಣೆಗಳನ್ನು ಕೂಗುತ್ತಾ ಸಂಭ್ರಮ ಆಚರಿಸುತ್ತಿರುವ ಕಾಂಗ್ರೆಸ್ ಕಾರ್ಯಕರ್ತರು ಅರ್ಧದಷ್ಟು ಮತಗಳ ಎಣಿಕೆ ಬಾಕಿಯಿರುವಾಗಲೇ ವಿಜಯೋತ್ಸವ ಆಚರಿಸುತ್ತಿದ್ದಾರೆ. ಸಂಭ್ರಮದಲ್ಲಿ ಭಾಗಿಯಾದ ಬಿಬಿಎಂಪಿ ಕಾರ್ಪೋರೇಟರ್ ವಸಂತಕುಮಾರ್ ಕೂಡಾ ರಿಜ್ವಾನ್ ಗೆಲುವಿನ ವಿಶ್ವಾಸದಲ್ಲಿದ್ದಾರೆ.
ಎಂಟು ಸುತ್ತುಗಳ ಮತ ಎಣಿಕೆ ಮುಕ್ತಾಯವಾಗಿದ್ದು 15397 ಮತಗಳ ಮುನ್ನಡೆ ಸಾಧಿಸಿರುವ ರಿಜ್ವಾನ್ ಒಂದು ಹಂತದಲ್ಲಿ ಗೆಲುವಿನ ಸನಿಹಕ್ಕೆ ಬಂದಿದ್ದಾರೆ ಎನ್ನಬಹುದಾಗಿದೆ. ಆದರೆ ಅಲಸೂರು ಮತ್ತು ಸಂಪಂಗಿರಾಮನಗರ ಮತಎಣಿಕೆಯಲ್ಲಿ ಮುನ್ನಡೆ ಕೊಂಚ ಕಡಿಮೆ ಆಗಲಿದೆ. ಆದರೆ, ಇದು ರಿಜ್ವಾನ್ ಗೆಲುವಿಗೆ ಮಾರಕವಾಗಲಾರದು ಎಂಬ ಮಾತು ಕೇಳಿಬರುತ್ತಿದೆ. ತಮಿಳು ಪ್ರಾಬಲ್ಯವಿರುವ ವಾರ್ಡ್ಗಳಲ್ಲಿ ಮತ ಎಣಿಕೆ ಆಗಬೇಕಿದ್ದು, ಇಲ್ಲಿ ಎಷ್ಟೇ ಮುನ್ನಡೆ ಸಿಕ್ಕರೂ, ಅದು ಶರವಣ ಅವರ ಗೆಲುವಿನ ಹಂತಕ್ಕೆ ತಲುಪುವುದು ಅನುಮಾನ ಎಂದು ಹೇಳಲಾಗುತ್ತಿದೆ.