ಬೆಂಗಳೂರು:ಕಿರುಕುಳ ತಾಳಲಾರದೆ ಗಂಡನ ಕೊಲೆಗೆ ಸುಪಾರಿ ನೀಡಿದ್ದ ಹೆಂಡತಿ ಸೇರಿದಂತೆ ಮೂವರು ಆರೋಪಿಗಳನ್ನು ಕಂಟೋನ್ಮೆಂಟ್ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಟಿನ್ ಫ್ಯಾಕ್ಟರಿಯ ಶಕ್ತಿ ನಗರ ನಿವಾಸಿ ಯಶೋಧ, ಸ್ನೇಹಿತರಾದ ಮುನಿರಾಜು ಹಾಗೂ ಪ್ರಭು ಬಂಧಿತ ಆರೋಪಿಗಳಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಲೋಕನಾಥ ಕೊಲೆಯಾದವನು.
ಯಶೋಧ ಹಾಗೂ ಲೋಕನಾಥ್ ದಂಪತಿ ಶಕ್ತಿನಗರದಲ್ಲಿ ವಾಸವಾಗಿದ್ದರು. ಜೀವನಕ್ಕಾಗಿ ಯಶೋಧ ಮನೆಗೆಲಸ ಮಾಡುತ್ತಿದ್ದರೆ ಗಂಡ ಗಾರೆ ಕೆಲಸ ಮಾಡುತ್ತಿದ್ದ. ಮದ್ಯ ವ್ಯಸನಿಯಾಗಿದ್ದ ಈತ ಪ್ರತಿದಿನ ಕುಡಿದು ಬಂದು ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಮದ್ಯ ಸೇವಿಸಲು ಹಣ ನೀಡುವಂತೆ ಪೀಡಿಸುತ್ತಿದ್ದ. ಹೆಂಡತಿ ಮೇಲೆ ಇಲ್ಲಸಲ್ಲದ ಅನುಮಾನ ಬೆಳೆಸಿಕೊಂಡು ಕಿರುಕುಳ ನೀಡುತ್ತಿದ್ದ.
ಗಂಡನ ಹಿಂಸೆ ತಾಳಲಾರದೆ ಬೇಸತ್ತ ಪತ್ನಿಯು ತಾನು ಕೆಲಸ ಮಾಡುತ್ತಿದ್ದ ಅಪಾರ್ಟ್ಮೆಂಟ್ ಬಳಿ ಪರಿಚಿತನಾಗಿದ್ದ ಮುನಿರಾಜುಗೆ ಕಿರುಕುಳದ ಬಗ್ಗೆ ತಿಳಿಸಿ ಗಂಡನನ್ನು ಕೊಲೆ ಮಾಡುವಂತೆ ಸುಪಾರಿ ನೀಡಿದ್ದಾಳೆ. ಸಹಚರ ಪ್ರಭುವಿಗು ವಿಷಯ ತಿಳಿಸಿ ಮುನಿರಾಜು, ಲೋಕನಾಥ್ನಿಗೆ ಮೇ 15 ರಂದು ಕರೆ ಮಾಡಿ ಮದ್ಯ ಕೊಡಿಸುವ ನೆಪದಲ್ಲಿ ಕಸ್ತೂರಿ ನಗರ ರೈಲ್ವೆ ಹಳಿ ಬಳಿ ಕರೆಯಿಸಿಕೊಂಡು ಮದ್ಯಪಾನ ಮಾಡಿಸಿದ್ದಾರೆ. ಬಳಿಕ ಆತನ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿದ್ದಾರೆ. ಸಹಜ ಸಾವು ಎಂದು ಬಿಂಬಿಸಲು ಬೈಯ್ಯಪ್ಪನ ಹಳ್ಳಿ-ಚನ್ನಸಂದ್ರ ನಡುವಿನ ರೈಲ್ವೆ ಮಾರ್ಗದ ಹಳಿ ಮೇಲೆ ಮೃತದೇಹವಿಟ್ಟು ಪರಾರಿಯಾಗಿದ್ದರು.