ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನದಿಗಳು ತುಂಬಿ ಹರಿಯುವುದು ಅಪರೂಪ. ಆದರೆ, ಈ ಬಾರಿ ಉತ್ತಮ ಮಳೆಯಿಂದ ಅರ್ಕಾವತಿ ನದಿ ತುಂಬಿ ಹರಿಯುತ್ತಿದೆ. 20 ವರ್ಷಗಳ ನಂತರ ಅರ್ಕಾವತಿ ನದಿ ಹರಿಯುವುದನ್ನ ನೋಡಿ ಜನರು ಸಂತಸಗೊಂಡಿದ್ದಾರೆ.
20 ವರ್ಷಗಳ ನಂತರ ತುಂಬಿ ಹರಿಯುತ್ತಿರುವ ಅರ್ಕಾವತಿ ನದಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ನದಿ ಅರ್ಕಾವತಿ. ಮಳೆಯ ಕೊರತೆಯಿಂದ ನದಿ ಹರಿಯುವುದು ನೋಡುವುದನ್ನೇ ಜನ ಮರೆತು ಬಿಟ್ಟಿದ್ದರು. ಆದರೆ ಈ ಬಾರಿಯ ಉತ್ತಮ ಮಳೆಯಾಗಿದ್ದರಿಂದ ಅರ್ಕಾವತಿ ನದಿ ಕೋಡಿ ಬಿದ್ದಿದೆ.
ನಂದಿ ಗಿರಿಧಾಮದ ಚನ್ನಗಿರಿ ಬೆಟ್ಟದಲ್ಲಿ ಉಗಮವಾಗುವ ಅರ್ಕಾವತಿ ನದಿ ಕೆರೆಯಿಂದ ಕೆರೆಗೆ ಹರಿಯುವ ಮೂಲಕ ರಾಮನಗರ ಜಿಲ್ಲೆ ಕನಕಪುರದ ಬಳಿ ಕಾವೇರಿ ನದಿಯಲ್ಲಿ ಸಂಗಮವಾಗುತ್ತದೆ. ಅರ್ಕಾವತಿ ಹರಿಯುವ ಬಹುತೇಕ ಕೆರೆಗಳು ಕೋಡಿ ಬಿದ್ದು ಹರಿಯುತ್ತಿವೆ. ಪ್ರಮುಖ ಚಿಕ್ಕರಾಯಪ್ಪನ ಹಳ್ಳಿಕೆರೆ, ಮೇಳೆಕೋಟೆ ಕೆರೆ, ಚಿಕ್ಕ ತುಮಕೂರು ಕೆರೆ, ದೊಡ್ಡ ತುಮಕೂರು ಕೆರೆ ಮತ್ತು ಕಾಕೋಳು ಕೆರೆಗಳು ಕೋಡಿ ಬಿದ್ದು ಹರಿಯುತ್ತಿವೆ.
ಇದೇ ರೀತಿ ಮಳೆಯಾದರೆ ಅರ್ಕಾವತಿ ನದಿಯಲ್ಲಿ ಬರುವ ಅತಿದೊಡ್ಡ ಹೆಸರಘಟ್ಟ ಕೆರೆ ಸಹ ಕೋಡಿ ಬೀಳಲಿದೆ. ಮುಂದೆ ಇದೇ ನೀರು ತಿಪ್ಪಗೊಂಡನಹಳ್ಳಿ ಜಲಾಶಯ ಸೇರಿ ನಂತರ ಸಂಗಮ ಬಳಿ ಕಾವೇರಿ ನದಿಯಲ್ಲಿ ಸಂಗಮವಾಗಲಿದೆ.
ಅರ್ಕಾವತಿ ನದಿ ತುಂಬಿ ಹರಿಯುತ್ತಿರುವುದು ಜಿಲ್ಲೆಯ ರೈತಾಪಿ ಜನರ ಖುಷಿಗೆ ಕಾರಣವಾಗಿದೆ. ಕೆರೆಗಳು ತುಂಬಿ ಹರಿಯುತ್ತಿರುವುದರಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿ ಮುಂದಿನ ಎರಡು ಮೂರು ವರ್ಷ ನೀರಾವರಿಗೆ ಯಾವುದೇ ಸಮಸ್ಯೆ ಇರುವುದಿಲ್ಲ ಎನ್ನುತ್ತಾರೆ ರೈತರು.
ಜಿಲ್ಲಾಡಳಿತದ ವತಿಯಿಂದ ಕೋಡಿ ಬಿದ್ದ ಕೆರೆಗಳಿಗೆ ಬಾಗಿನ ಅರ್ಪಿಸಲಾಗಿದೆ. ಜತೆಗೆ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ಮನೆಗಳು ಬಿದ್ದು ಹಾನಿ ಸಂಭವಿಸಿದ್ದು, ಸಂತ್ರಸ್ತರಿಗೆ ತಕ್ಷಣವೇ ಪರಿಹಾರ ನೀಡಲಾಗುವುದು. ಕೆರೆಗಳು ಕೋಡಿ ಬಿದ್ದಿರುವುದರಿಂದ ಕೆಲವು ಕಡೆ ಸಂಪರ್ಕ ಸಹ ಕಡಿತಗೊಂಡಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ತಿಳಿಸಿದ್ದಾರೆ.