ನೆಲಮಂಗಲ: ಗ್ರಾಮ ಪಂಚಾಯತಿ ಸದಸ್ಯನೋರ್ವನ ಪತ್ನಿಯು, ಆತನ ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಘಟನೆ ನೆಲಮಂಗಲದ ಅರಿಶಿನಕುಂಟೆಯಲ್ಲಿ ನಡೆದಿದೆ. ಮಹಿಳೆಯ ಸಂಬಂಧಿಕರು ಕೊಲೆ ಆರೋಪ ಮಾಡಿ, ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ನಂದಿನಿ (28) ಮೃತ ದುರ್ದೈವಿ. ಅರಿಶಿನಕುಂಟೆ ಗ್ರಾ. ಪಂಚಾಯತಿ ಸದಸ್ಯ ರಂಗಸ್ವಾಮಿ ಜತೆ ನಂದಿನಿ 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ತವರು ಮನೆಯಿಂದ ಹಣ ತರುವಂತೆ ಮೃತಳ ಗಂಡ, ಅತ್ತೆ ಮತ್ತು ಭಾವ ಕಿರುಕುಳ ಕೊಡುತ್ತಿದ್ದ ಕಾರಣ ಮಾನಸಿಕವಾಗಿ ಕುಗ್ಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ನೇಣಿಗೆ ಶರಣಾದ ಮಹಿಳೆಯ ಕುಟುಂಬಸ್ಥರ ಪ್ರತಿಭಟನೆ ನಂದಿನಿ ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿಯಲ್ಲ, ಆಕೆಯ ಮೃತದೇಹದಲ್ಲಿ ಹಲ್ಲೆ ನಡೆಸಿರುವ ಗುರುತುಗಳಿವೆ. ಆಕೆಯನ್ನು ಹೊಡೆದು ಕೊಲೆ ಮಾಡಿದ್ದಾರೆಂದು ಮೃತಳ ಕುಟುಂಬದವರು ಆರೋಪ ಮಾಡುತ್ತಿದ್ದಾರೆ.
ಈ ಘಟನೆ ನಡೆದು ದಿನ ಕಳೆದರೂ ಆರೋಪಿಗಳ ಬಂಧನವಾಗಿಲ್ಲ. ಇದರಿಂದ ಅಕ್ರೋಶಗೊಂಡಿರುವ ಮೃತಳ ಸಂಬಂಧಿಕರು ನೆಲಮಂಗಲ ಟೌನ್ ಸ್ಟೇಷನ್ ಮುಂದೆ ಪ್ರತಿಭಟನೆ ನಡೆಸಿ ಆರೋಪಿಗಳನ್ನ ಬಂಧಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಪೊಲೀಸರು ರಾಜಿ ಮಾಡಿಕೊಳ್ಳುವಂತೆ ಸಂಧಾನ ನಡೆಸುತ್ತಿದ್ದಾರೆಂದು ಆರೋಪ ಮಾಡುತ್ತಿದ್ದಾರೆ.
ಸದ್ಯ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ರಾಜಕೀಯ ಪ್ರಭಾವ ಬಳಸಿ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನದಲ್ಲಿದ್ದು, ನಂದಿನಿಗೆ ನ್ಯಾಯ ಕೊಡಿಸುವಂತೆ ಕುಟುಂಬದವರು ಒತ್ತಾಯಿಸಿದ್ದಾರೆ.