ಬೆಂಗಳೂರು: ಆಧಾರ್ ಗುರುತಿನ ಚೀಟಿಯ ತ್ರಾಸು ಇಂದಿಗೂ ತಪ್ಪದಾಗಿದೆ. ಹಲ ವರ್ಷಗಳಿಂದ ಪ್ರಕ್ರಿಯೆ ನಡೆದಿದ್ದರೂ ಸಮಸ್ಯೆಗಳು ಬಗೆಹರಿಯದಾಗಿವೆ.
ಆಧಾರ್ ಗುರುತು ಪತ್ರದಲ್ಲಿನ ತಿದ್ದುಪಡಿಗಾಗಿ ನಿತ್ಯವೂ ತಾಸುಗಟ್ಟಲೇ ಪಾಳಿ ಹಚ್ಚಿ ಕಾಯುವುದನ್ನು ಆಧಾರ್ ಕಚೇರಿ ಮುಂಭಾಗ ಕಾಣಬಹುದಾಗಿದೆ.
ಪ್ರತಿ ಸರ್ಕಾರಿ-ಖಾಸಗಿ ಯೋಜನೆಗಳ ಲಾಭ ಪಡೆಯಲು ಆಧಾರ ಕಾರ್ಡ್ ಕಡ್ಡಾಯವಾಗಿದೆ. ಆದರೆ, ಕಲಬುರಗಿ ನಗರದಲ್ಲಿ ಏಳು ಲಕ್ಷ ಜನರು ವಾಸವಿದ್ದು, ಇಷ್ಟೊಂದು ಜನಸಂಖ್ಯೆಗೆ ಕೇವಲ ಮೂರು ಆಧಾರ್ ಕೇಂದ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.
ಇದರಿಂದಾಗಿ ಆಧಾರ್ ಕೇಂದ್ರಗಳಲ್ಲಿ ಜನದಟ್ಟಣೆ ಅಧಿಕವಾಗಿದೆ. ತಾಂತ್ರಿಕ ದೋಷ ಕಾರಣದಿಂದಾಗಿ ಸರಾಗವಾಗಿ ಕೆಲಸಗಳೂ ಸಾಗುತ್ತಿಲ್ಲ. ಹೀಗಾಗಿ, ಇನ್ನಷ್ಟು ಆಧಾರ ಕೇಂದ್ರಗಳನ್ನು ತೆರೆಯಲು ಜನರು ಒತ್ತಾಯಿಸುತ್ತಿದ್ದಾರೆ.
ಆಧಾರ್ ತಿದ್ದುಪಡಿ ಕೇಂದ್ರಗಳ ಕೊರತೆ ಕುರಿತು ಮಾಹಿತಿ.. ಇನ್ನು, ಸರ್ಕಾರಿ ಅಧೀನದಲ್ಲಿ ಕಾರ್ಯನಿರ್ವಹಿಸಲು ಸರ್ಕಾರ ಆದೇಶಿಸಿದ ಬಳಿಕ ದಾವಣಗೆರೆ ಜಿಲ್ಲೆಯಲ್ಲಿ ಆಧಾರ್ ತಿದ್ದುಪಡಿ ಪ್ರಕರಣ ಹೆಚ್ಚಾಗಿ ಕಂಡು ಬಂದಿಲ್ಲ. ಇದರಿಂದಾಗಿ, ಶರವೇಗದಲ್ಲಿ ಜನರಿಗೆ ಆಧಾರ್ಗೆ ಸೇರಿದ ಸಮಸ್ಯೆಗಳು ಇತ್ಯರ್ಥಗೊಳ್ಳುತ್ತಿವೆ.
ಜಿಲ್ಲೆಯಲ್ಲಿ ಒಟ್ಟು 30ಕ್ಕೂ ಹೆಚ್ಚು ಆಧಾರ್ ಕೇಂದ್ರಗಳಿವೆ. ಅದರಲ್ಲಿ 10 ಆಧಾರ್ ಸೇವಾ ಕೇಂದ್ರಗಳು ಟೆಂಡರ್ ಪಡೆಯುವ ಮೂಲಕ, ಇನ್ನುಳಿದ 20 ಕೇಂದ್ರಗಳು ನಾಡಕಚೇರಿ, ತಾಲೂಕು ಕಚೇರಿ, ಗ್ರಾಪಂ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಮೈಸೂರಿನ ಜನತೆಗೆ ಹೊಸದಾಗಿ ಆಧಾರ್ ಕಾರ್ಡ್ ಮಾಡಿಸಲು ಅಥವಾ ತಿದ್ದುಪಡಿಗೆ ಯಾವುದೇ ಆಧಾರ್ ಕೇಂದ್ರಗಳ ಕೊರತೆ ಎದುರಾಗಿಲ್ಲ. ಆಧಾರ್ಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಾಗಲಿ ಅರ್ಧ ಗಂಟೆಯಲ್ಲಿ ಪರಿಹಾರ ದೊರೆಯುತ್ತದೆ. ಆದರೆ, ರಾಜ್ಯದ ಕೆಲ ಜಿಲ್ಲೆಗಳಲ್ಲಿ ಆಧಾರ್ ಸಮಸ್ಯೆಗಳು ವಾರ, ತಿಂಗಳಾದ್ರೂ ವಿಲೇವಾರಿಯಾಗುತ್ತಿಲ್ಲ.
ಇನ್ನು, ಗ್ರಾಮೀಣ ಪ್ರದೇಶದ ಜನರು ಜಮೀನಿನಲ್ಲಿ ಕೆಲಸಗಳೆಲ್ಲವನ್ನೂ ಬಿಟ್ಟು ಚಿಕ್ಕಪುಟ್ಟ ತಿದ್ದುಪಡಿ ಇದ್ದರೂ ಆಧಾರ್ ಕೇಂದ್ರಗಳಲ್ಲಿ ಇಡೀ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.