ಬೆಂಗಳೂರು: ಲಾಕ್ಡೌನ್ ಸಡಿಲಿಕೆಯಿಂದ ರಾಜ್ಯ ಯಥಾಸ್ಥಿತಿಗೆ ಮರಳುತ್ತಿದ್ದರೂ ಬಹಳಷ್ಟು ಮಂದಿ ಉದ್ಯೋಗ ಕಳೆದುಕೊಂಡು ಬದುಕು ಸಾಗಿಸುವುದು ಹೇಗಪ್ಪಾ ಎಂದು ಚಿಂತಾಕ್ರಾಂತರಾಗಿದ್ದಾರೆ. ಆಟೋ ಚಾಲಕರು ಕೂಡ ಇದಕ್ಕೆ ಹೊರತಾಗಿಲ್ಲ. ಕೋವಿಡ್ ಸಂಕಷ್ಟವೇ ದೊಡ್ಡ ತಲೆನೋವಾಗಿದ್ದರೆ, ಇತ್ತ ಬ್ಯಾಂಕ್ ಮತ್ತು ಫೈನಾನ್ಸ್ ಅಧಿಕಾರಿಗಳಿಂದಲೂ ಕಾಟ ಹೆಚ್ಚಾಗಿದೆ.
ಕಲಬುರಗಿ ನಗರದಲ್ಲಿ ಶೇ.80ರಷ್ಟು ಸಾರಿಗೆ ವ್ಯವಸ್ಥೆ ಕಲ್ಪಿಸುತ್ತಿರುವ ಆಟೋ ಚಾಲಕರು ಕೊರೊನಾದಿಂದ ನಲುಗಿ ಹೋಗಿದ್ದಾರೆ. ಜಿಲ್ಲೆಯಲ್ಲಿ 12 ಸಾವಿರ ಆಟೋಗಳು ನಿತ್ಯ ರಸ್ತೆಗಿಳಿಯುತ್ತಿವೆ. ಈ ಮುಂಚೆ 700 ರಿಂದ 900 ಸಂಪಾದಿಸುತ್ತಿದ್ದವರು ಈಗ 300 ರಿಂದ 400 ರೂಪಾಯಿ ಮಾತ್ರ ದುಡಿಯುತ್ತಿದ್ದಾರೆ. ಈ ಹಣದಲ್ಲಿ ಜೀವನ ನಿರ್ವಹಣೆ ಕಷ್ಟ ಎಂಬಂತಾಗಿದೆ. ಇನ್ನು ಮತ್ತೊಂದು ದುರಂತ ಅಂದರೆ ಫೈನಾನ್ಸ್ ಮತ್ತು ಬ್ಯಾಂಕ್ ಅಧಿಕಾರಿಗಳಿಂದ ಕಿರುಕುಳ ಹೆಚ್ಚಾಗಿದೆ. ಹೀಗಾಗಿ ಆಟೋ ಚಾಲಕರು ಮತ್ತಷ್ಟು ಒತ್ತಡಕ್ಕೆ ಒಳಗಾಗಿದ್ದಾರೆ.
ಕೋಟೆನಾಡು ಚಿತ್ರದುರ್ಗದಲ್ಲಿ ಕೊರೊನಾ ಭೀತಿಯಿಂದ ಜನರು ಆಟೋ ಹತ್ತಲು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಅವರ ಜೀವನ ಅಯೋಮಯವಾಗಿದ್ದು, ಸಾಲಗಾರರಿಗೆ ಮರುಪಾವತಿ ಮಾಡಲು ಹಣವಿಲ್ಲದೇ ಹೈರಾಣಾಗಿದ್ದಾರೆ. ಇನ್ನು ತಿಂಗಳ ಇಎಮ್ಐ, ಮಕ್ಕಳ ಶಾಲೆ ಫೀಸ್, ಆಟೋಗೆ ಅವಶ್ಯಕವಾಗಿರುವ ಗ್ಯಾಸ್ ತುಂಬಿಸುವುದು, ಆಟೋ ಕಂತು, ಇನ್ಶೂರೆನ್ಸ್ ಈ ಎಲ್ಲದಕ್ಕೂ ಪಾವತಿ ಮಾಡಲು ಹಣ ಇಲ್ಲದೇ ಒದ್ದಾಡಬೇಕಾಗಿದೆ. ಲೋನ್ ಪಾವತಿಸಿ ಎಂದು ಬ್ಯಾಂಕ್ನ ಸಿಬ್ಬಂದಿ ಫೋನ್ ಮೇಲೆ ಫೋನ್ ಮಾಡುತ್ತಿರುವುದು ಪೇಚಿಗೆ ಸಿಲುಕಿಸಿದಂತಾಗಿದೆ ಎಂದು ಆಟೋ ಚಾಲಕರು ಅಳಲು ತೋಡಿಕೊಳ್ಳುತ್ತಾರೆ.
ಫೋನ್ ಮೇಲೆ ಫೋನ್ ಮಾಡಿ ಸಾಲ ತೀರಿಸಿ ಎಂದು ಕಿರುಕುಳ ರಾಜ್ಯದ 7 ಲಕ್ಷದ 75 ಸಾವಿರ ಚಾಲಕರಿಗೆ ರಾಜ್ಯ ಸರ್ಕಾರ ತಲಾ 5 ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಿದೆ. ಆದರೆ, ಶೇ.60ರಷ್ಟು ಚಾಲಕರು ಅದರ ಲಾಭ ಪಡೆದುಕೊಂಡಿದ್ದರೆ, 40ರಷ್ಟು ಚಾಲಕರ ಕೈಗೆ ಈ ಹಣ ಇನ್ನೂ ಸೇರಿಲ್ಲ. ಪ್ರತಿಯೊಂದರ ಬೆಲೆ ದುಬಾರಿಯಾಗಿದ್ದು, ಅತಿ ಕಡಿಮೆ ಸಂಪಾದನೆಯಲ್ಲಿ ಜೀವನ ನಡೆಸುವುದು ಹೇಗೆ ಎಂದು ಚಾಲಕರು ಕಂಗಾಲಾಗಿದ್ದಾರೆ. ಆಟೋ ಇಎಮ್ಐ ಕಡಿತ ಮತ್ತು ಒಂದಿಷ್ಟು ಸಾಲ ಸೌಲಭ್ಯ ನೀಡಿದ್ರೆ ನಾವು ಜೀವನ ಕಟ್ಟಿಕೊಳ್ಳಬಹುದು. ಸರ್ಕಾರ ನಮಗೂ ಬದುಕಲು ವ್ಯವಸ್ಥೆ ಮಾಡಿ ಕೊಡಲಿ ಎಂಬುದು ಆಟೋ ಚಾಲಕರ ಮನವಿ.