ಬೆಂಗಳೂರು :ರಾಜ್ಯದ ಕಾರ್ಮಿಕರಿಗೆ ಹೆಚ್ಚಿನ ಅನುಕೂಲ ಆಗುವಂತೆ ಕೇಂದ್ರದ ಸಹಕಾರ ಕೋರಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗಾಗಿಯೂ ಸಹ ಕೇಂದ್ರಕ್ಕೆ ಹಲವು ಪ್ರಸ್ತಾವನೆಗಳನ್ನು ಸಲ್ಲಿಸಲಾಗಿದೆ. ಈ ಮನವಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ತಿಳಿಸಿದ್ದಾರೆ.
ಕಾರ್ಮಿಕ ಇಲಾಖೆ ಮತ್ತು ತವರು ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ದೆಹಲಿ ಪ್ರವಾಸ ಕೈಗೊಂಡಿರುವ ಸಚಿವರ ನೇತೃತ್ವದ ನಿಯೋಗವು ಸರತಿಯಂತೆ ಕೇಂದ್ರ ಸಚಿವರುಗಳನ್ನು ಭೇಟಿ ಮಾಡಿ ಅಭಿವೃದ್ಧಿ ಪರವಾದ ಚರ್ಚೆ-ಸಮಾಲೋಚನೆಗಳನ್ನು ನಡೆಸಿ ಕೇಂದ್ರದ ಅಗತ್ಯ ಸಹಕಾರ ಕೋರಿದೆ.
ಕೇಂದ್ರ ಕಾರ್ಮಿಕ ಸಚಿವ ಭೂಪೇಂದ್ರ ಸಿಂಗ್ ಯಾದವ್ ಅವರನ್ನು ರಾಜ್ಯ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಭೇಟಿ ಮಾಡಿ ಮಾತುಕತೆ ನಡೆಸಿದರು, ಈ ವೇಳೆ ಇಎಸ್ಐ ಆಸ್ಪತ್ರೆಗಳಲ್ಲಿ ಅಸಂಘಟಿತ ಕಾರ್ಮಿಕರಿಗೂ ವೈದ್ಯಕೀಯ ಸೌಲಭ್ಯ ದೊರಕುವಂತೆ ಕ್ರಮವಹಿಸಬೇಕೆಂದು ಮನವಿ ಮಾಡಿದರು. ಐಎಸ್ಐ ಆಸ್ಪತ್ರೆಗಳಲ್ಲಿ 'ಆಯುಷ್' ವಿಭಾಗಗಳನ್ನು ತೆರೆಯಬೇಕು, ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಒಂದರಂತೆ ಇಎಸ್ಐ ಆಸ್ಪತ್ರೆಗಳನ್ನು ತೆರೆಯುವಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
69 ಚಿಕಿತ್ಸಾಲಗಳಿಗೆ ಅನುಮತಿಗೆ ಕೋರಿಕೆ :ರಾಜ್ಯ ಕಾರ್ಮಿಕ ಇಲಾಖೆಯು ರಾಜ್ಯದ ವಿವಿಧೆಡೆಗಳಲ್ಲಿ 69 ಚಿಕಿತ್ಸಾಲಯಗಳನ್ನು ತೆರೆಯಲು ಅನುಮತಿ ಕೋರಲಾಗಿದೆ. ಈ ಸಂಬಂಧ ಕೇಂದ್ರವು ಇದೀಗ 19ಕ್ಕೆ ಅನುಮತಿ ನೀಡಲಾಗಿದೆ. ಜಿಲ್ಲೆಗಳಲ್ಲಿ ಇರುವ ಚಿಕಿತ್ಸಾಲಯಗಳನ್ನು 'ಆರೋಗ್ಯ ಕಲ್ಯಾಣ ಕೇಂದ್ರ'ಗಳಾಗಿ ಪರಿವರ್ತಿಸಬೇಕು. ಈ ಕಲ್ಯಾಣ ಕೇಂದ್ರಗಳಲ್ಲಿ ಇಸಿಜಿ, ಮೈನರ್ ಓಟಿ, ಆಕ್ಸಿಜನ್ ಸೇವೆಗಳ ಜತೆಗೆ ಅಗತ್ಯ ವೈದ್ಯ ಸಿಬ್ಬಂದಿ ಒದಗಿಸಬೇಕು ಎಂದು ಮನವಿ ಸಲ್ಲಿಸಿದರು.
ತೆರಿಗೆ ವಿನಾಯ್ತಿಗೆ ಮನವಿ :ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಸೆಸ್ ಸಂಗ್ರಹದ ಮೂಲಕ ಆರ್ಥಿಕ ಸಂಪನ್ಮೂಲ ಹೊಂದಿದೆ. ಈಗಾಗಲೇ ಇತರೆ ಮಂಡಳಿಗಳಾದ ಕಾಫಿ ಬೋರ್ಡ್, ತಂಬಾಕು ಮಂಡಳಿಗೆ ನೀಡಿರುವಂತೆ ಕಾರ್ಮಿಕ ಕಲ್ಯಾಣ ಮಂಡಳಿಗೂ ಸೆಸ್ ಮೇಲಿನ ತೆರಿಗೆಯಿಂದ ರಿಯಾಯ್ತಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿಕೊಳ್ಳಲಾಯಿತು.
ಸರ್ವ ಋತು ರಸ್ತೆಗಳ ನಿರ್ಮಾಣಕ್ಕೆ ಮನವಿ :ಗುಡ್ಡಗಾಡು ಸೇರಿದಂತೆ ಅತಿ ಹೆಚ್ಚು ಮಳೆ ಪ್ರದೇಶವಾಗಿರುವ ಉತ್ತರ ಕನ್ನಡ ಜಿಲ್ಲೆಯ ರಸ್ತೆಗಳನ್ನು ಕೇಂದ್ರ ಸರ್ಕಾರದ ರಸ್ತೆ ನಿಧಿಯಿಂದ ಅಭಿವೃದ್ಧಿಪಡಿಸಬೇಕು ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಶಿವರಾಂ ಹೆಬ್ಬಾರ್ ಮನವಿ ಮಾಡಿದರು.
ಹಾವೇರಿಯಲ್ಲಿ ವೈದ್ಯಕೀಯ ಕಾಲೇಜಿಗೆ ಮನವಿ :ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರನ್ನು ಭೇಟಿ ಮಾಡಿ ಹಾವೇರಿ ಜಿಲ್ಲೆಯ ಮೂಲಸೌಕರ್ಯಗಳ ಅಭಿವೃದ್ಧಿ ಸಂಬಂಧ ಚರ್ಚಿಸಿದರು. ಜಿಲ್ಲೆಗೆ ವೈದ್ಯಕೀಯ ಕಾಲೇಜಿಗೆ (ಲೆಟರ್ ಆಫ್ ಪರ್ಮಿಷನ್) ಎಂಬಿಬಿಎಸ್ ಆರಂಭಿಸಲು ಮನವಿ ಸಲ್ಲಿಸಿದರು.
ಕೇಂದ್ರ ಸಚಿವರ ಭೇಟಿ ಬಳಿಕ ಮಾತನಾಡಿದ ಸಚಿವ ಹೆಬ್ಬಾರ್, ದೆಹಲಿ ಭೇಟಿ ಫಲಪ್ರದವಾಗಿದೆ. ಕೇಂದ್ರದ ಸಚಿವರು ನಮ್ಮ ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಕಾರ್ಮಿಕ ಇಲಾಖೆ ಅಪರ ಪ್ರಧಾನ ಕಾರ್ಯದರ್ಶಿ ಡಾ.ಜಿ.ಕಲ್ಪನಾ, ಕಾರ್ಮಿಕ ಕಲ್ಯಾಣ ಮಂಡಳಿ ಕಾರ್ಯದರ್ಶಿ ಎಂ.ಪಿ.ಗುರುಪ್ರಸಾದ್, ಸಚಿವರ ಆಪ್ತ ಕಾರ್ಯದರ್ಶಿ ಮಂಜುನಾಥ್ ಬಳ್ಳಾರಿ, ಮಂಡಳಿ ಜಂಟಿ ಕಾರ್ಯದರ್ಶಿ ಡಾ.ಶಿವಪುತ್ರ ಬಾಬುರಾವ್ ಸೇರಿದಂತೆ ಇಲಾಖೆ ಹಿರಿಯ ಅಧಿಕಾರಿಗಳು ನಿಯೋಗದಲ್ಲಿದ್ದರು.
ಇದನ್ನೂ ಓದಿ:ಸಮಗ್ರ ನೀರಾವರಿ ಯೋಜನೆ ಜಾರಿಗೆ ಆಗ್ರಹಿಸಿ ಟ್ಯಾಕ್ಟರ್ ರ್ಯಾಲಿ : ಎಸ್. ಆರ್ ಪಾಟೀಲ್