ಕರ್ನಾಟಕ

karnataka

ETV Bharat / city

ಎಪಿಎಂಸಿ ತಿದ್ದುಪಡಿ ವಿಧೇಯಕ ರೈತರಿಗೆ ಮರಣ ಶಾಸನ- ಸದನದಲ್ಲಿ ಸಿದ್ದರಾಮಯ್ಯ ಕಿಡಿ

ಎಪಿಎಂಸಿ ತಿದ್ದುಪಡಿ ವಿಧೇಯಕ ರೈತರಿಗೆ ಮರಣ ಶಾಸನವಾಗಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಎಪಿಎಂಸಿ ತಿದ್ದುಪಡಿ ಬಗ್ಗೆ ಕೇಂದ್ರ ಸರ್ಕಾರ ಹೇಳಿದೆ. ಅವರು ಹೇಳಿದ್ದಾರೆ. ನೀವು ಒಪ್ಪಿಕೊಂಡು ಬಿಟ್ರಿ. ಇದರಿಂದ ಡಿ-ಮಾರ್ಟ್, ರಿಲಯನ್ಸ್ ನಂತವರು ಬರ್ತಾರೆ. ಅವರಿಗೆ ಬೇಕಾದ ಬೆಲೆ ಅವರು ಮಾಡಿಕೊಳ್ತಾರೆ. ರೈತರ ಮೇಲೆ ಸವಾರಿ ಮಾಡ್ತಾರೆ..

approval-to-apmc-act-amendment-in-legislative-assembly-today
ವಿಧಾನಸಭೆ ಕಲಾಪ

By

Published : Sep 26, 2020, 7:32 PM IST

Updated : Sep 26, 2020, 8:01 PM IST

ಬೆಂಗಳೂರು :ಪ್ರತಿಪಕ್ಷಗಳ ಸಭಾತ್ಯಾಗದ ಮಧ್ಯೆ ವಿವಾದಿತ ಎಪಿಎಂಸಿ ತಿದ್ದುಪಡಿ ವಿಧೇಯಕಕ್ಕೆ ಸರ್ಕಾರ ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಿತು.

ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಎಪಿಎಂಸಿ ತಿದ್ದುಪಡಿ ವಿಧೇಯಕವನ್ನು ಸದನದಲ್ಲಿ ಪರ್ಯಾಲೋಚಿಸಿದರು. ಈ ತಿದ್ದುಪಡಿ ವಿಧೇಯಕದ ಪ್ರಕಾರ ರೈತರು ತಾವು ಬೆಳೆದ ಉತ್ಪನ್ನವನ್ನು ಎಲ್ಲಿ ಬೇಕಾದ್ರೂ ಮಾರಾಟ ಮಾಡಬಹುದಾಗಿದೆ. ಎಪಿಎಂಸಿ ಒಳಗೆ, ಹೊರಗೂ ಮಾರಾಟ ಮಾಡಬಹುದು. ಎಪಿಎಂಸಿಯಲ್ಲೇ ಮಾರಾಟ ಮಾಡಬೇಕೆಂಬ ಷರತ್ತನ್ನು ತೆಗೆದಿದ್ದೇವೆ ಎಂದು ವಿವರಿಸಿದರು.

ಎಪಿಎಂಸಿ ತಿದ್ದುಪಡಿ ವಿಧೇಯಕಕ್ಕೆ ಸರ್ಕಾರ ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ವಿಧೇಯಕದಡಿ ಸೆಕ್ಷನ್‌ 8(2) ಮತ್ತು ಸೆಕ್ಷನ್‌ 117 ತಿದ್ದುಪಡಿಗಳನ್ನು ತರಲಾಗಿದೆ. ಸೆಕ್ಷನ್‌ 8(2)ಕ್ಕೆ ಮಾಡಿರುವ ತಿದ್ದುಪಡಿ ಪ್ರಕಾರ, ಮುಖ್ಯ ಮಾರುಕಟ್ಟೆ ಪ್ರಾಂಗಣ ಹಾಗೂ ಉಪ-ಮಾರುಕಟ್ಟೆ ಪ್ರಾಂಗಣಗಳಲ್ಲಿ ನಡೆಯುವ ಕೃಷಿ ಉತ್ಪನ್ನಗಳ ಸಗಟು ಮಾರಾಟ ವ್ಯವಹಾರಕ್ಕಷ್ಟೇ ಎಪಿಎಂಸಿಗಳ ಕಾರ್ಯ ಕ್ಷೇತ್ರವನ್ನು ಸೀಮಿತಗೊಳಿಸಲಾಗಿದೆ. ತಿದ್ದುಪಡಿ ಮಾಡಲಾದ ಮತ್ತೊಂದು ಸೆಕ್ಷನ್‌ 117. ಇದು ಕಾಯ್ದೆಯ ಸೆಕ್ಷನ್‌ 8(b) (1) ಯನ್ನು ಉಲ್ಲಂಘಿಸಿದವರಿಗೆ, ಅಂದ್ರೆ ಮಾರುಕಟ್ಟೆ ಪ್ರಾಂಗಣಗಳ ಹೊರಗೆ ವ್ಯವಹಾರ ಮಾಡಿ ಕಾನೂನು ಉಲ್ಲಂಘಿಸಿದವರಿಗೆ, ವಿಧಿಸಲಾಗುವ ದಂಡಕ್ಕೆ ಸಂಬಂಧಿಸಿದ್ದಾಗಿದೆ ಎಂದು ವಿವರಿಸಿದರು.

ಇದು ರೈತರಿಗೆ ಮರಣ ಶಾಸನ :ಎಪಿಎಂಸಿ ತಿದ್ದುಪಡಿ ವಿಧೇಯಕ ರೈತರಿಗೆ ಮರಣ ಶಾಸನವಾಗಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಎಪಿಎಂಸಿ ತಿದ್ದುಪಡಿ ಬಗ್ಗೆ ಕೇಂದ್ರ ಸರ್ಕಾರ ಹೇಳಿದೆ. ಅವರು ಹೇಳಿದ್ದಾರೆ. ನೀವು ಒಪ್ಪಿಕೊಂಡು ಬಿಟ್ರಿ. ಇದರಿಂದ ಡಿ-ಮಾರ್ಟ್, ರಿಲಯನ್ಸ್ ನಂತವರು ಬರ್ತಾರೆ. ಅವರಿಗೆ ಬೇಕಾದ ಬೆಲೆ ಅವರು ಮಾಡಿಕೊಳ್ತಾರೆ. ರೈತರ ಮೇಲೆ ಸವಾರಿ ಮಾಡ್ತಾರೆ. ರೈತರ ಜುಟ್ಟನ್ನು ಖಾಸಗಿಯವರಿಗೆ ಯಾಕೆ ಕೊಡ್ತೀರಾ?. ಎಪಿಎಂಸಿ ಇತಿಹಾಸ ನಿಮಗೆ ಗೊತ್ತಿದೆಯೇನ್ರೀ?. ಇದು ಬ್ರಿಟಿಷರ ಕಾಲದಲ್ಲಿ ಬಂದಿದ್ದು. ರಾಯಲ್ ಕಮಿಷನ್ ವರದಿ ಇದನ್ನು ಶಿಫಾರಸು ಮಾಡಿದ್ದು. ರೈತರಿಗಾಗುವ ಅನ್ಯಾಯವನ್ನು ಬಿಡಿಸಿ ಮುಂದಿಡಲಾಗಿತ್ತು. ಅದಕ್ಕೆ ಬ್ರಿಟಿಷರ ಅವಧಿಯಲ್ಲಿ ಈ ಎಪಿಎಂಸಿ ಜಾರಿಗೆ ಬಂತು. 1935ರಲ್ಲಿ ಇದು ಜಾರಿಗೆ ಬಂತು ಎಂದು ವಿವರಿಸಿದರು.

ಎಪಿಎಂಸಿ ಕಾಯ್ದೆ ತಂದು ರೈತರಿಗೆ ಅನ್ಯಾಯ ‌ಮಾಡಬೇಡಿ. ಸ್ವಲ್ಪ ದಿನ ಈ ತಿದ್ದುಪಡಿ ಕಾಯ್ದೆಯಿಂದ ಲಾಭ ಬರಬಹುದು. ಆದರೆ, ಬಳಿಕ ಸಮಸ್ಯೆ ಎದುರಾಗಲಿದೆ. ಇದರ‌ ಬದಲು ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡಿ. ಅದನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಿ. ಬೆಳೆ ವೆಚ್ಚದ ಮೇಲೆ 50% ಕನಿಷ್ಠ ಬೆಂಬಲ ಬೆಲೆ ಸಿಗುವ ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡಿ‌. ಇದು ರೈತ ವಿರೋಧಿ ತಿದ್ದುಪಡಿ, ಇದು ರೈತರಿಗೆ ಮರಣ ಶಾಸನವಾಗಲಿದೆ. ಈ ತಿದ್ದುಪಡಿ ಕಾಯ್ದೆಯನ್ನು ಹಿಂದಕ್ಕೆ ಪಡೆಯಿರಿ‌ ಎಂದು ಒತ್ತಾಯಿಸಿದರು.

ಎಪಿಎಂಸಿ ಮುಚ್ಚುವ ಆತಂಕ ಇದೆ :ಎಪಿಎಂಸಿ‌ ತಿದ್ದುಪಡಿ ವಿಧೇಯಕಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಎಂಪಿಎಂಸಿ ತಿದ್ದುಪಡಿ ವಿಧೇಯಕ ರೈತರಿಗೆ ಪೂರಕವಾಗಿಲ್ಲ. ಇದರಿಂದ ಎಪಿಎಂಸಿಗಳನ್ನೇ ಮುಚ್ಚಬಹುದಾದ ಆತಂಕವಿದೆ. 2006ರಲ್ಲೇ ಬಿಹಾರದಲ್ಲಿ ಎಪಿಎಂಸಿ ರದ್ದು ಮಾಡಿದ್ದಾರೆ. ಅಲ್ಲಿನ ರೈತರು ಮಾರುಕಟ್ಟೆಯಿಲ್ಲದೆ ಪರದಾಡ್ತಿದ್ದಾರೆ. ಈಗ ರಾಜ್ಯದಲ್ಲೂ ತಂದರೆ ರೈತರಿಗೆ ಕಷ್ಟವಾಗಲಿದೆ. 30 ಸಾವಿರ ಹಮಾಲಿಗಳು ಎಪಿಎಂಸಿಗಳಲ್ಲಿದ್ದಾರೆ. ಇದನ್ನು ಜಾರಿಗೆ ತಂದ್ರೆ ಹಮಾಲಿಗಳ ಕಥೆಯೇನು?. ಅವರಿಗೆ ಯಾವ ವ್ಯವಸ್ಥೆ ಮಾಡ್ತೀರಾ ಎಂದು ಪ್ರಶ್ನಿಸಿದರು.

ಬಳಿಕ ಮಾತನಾಡಿದ ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಈ ತಿದ್ದುಪಡಿ ಮೂಲಕ ರೈತರಿಗೆ ತಾವು ಬೆಳೆದಂಥ ಬೆಳೆಯನ್ನು ಎಲ್ಲಿ ಬೇಕಾದ್ರೂ ಉತ್ತಮ ಬೆಲೆಗೆ ಮಾರಾಟ ಮಾಡುವ ಅವಕಾಶ ನೀಡಲಾಗುತ್ತಿದೆ. ನಮ್ಮ ಸರ್ಕಾರ ಯಾವ ರೈತರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತದೆ ಎಂದು ಸ್ಪಷ್ಟಪಡಿಸಿದರು. ಸಚಿವರ ಭರವಸೆಗೆ ಸಮಾಧಾನಗೊಳ್ಳದ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಸಭಾತ್ಯಾಗ ಮಾಡಿದರು. ಈ ಮಧ್ಯೆ ವಿವಾದಿತ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಯಿತು.

Last Updated : Sep 26, 2020, 8:01 PM IST

ABOUT THE AUTHOR

...view details