ಬೆಂಗಳೂರು: ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರನ್ನ ನೇಮಿಸುವಾಗ ಸುಪ್ರೀಂಕೋರ್ಟ್ ನೀಡಿದ ಮಾರ್ಗಸೂಚಿಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದ ಅನರ್ಹ ಶಾಸಕ ಡಾ.ಕೆ ಸುಧಾಕರ್ ಅವರನ್ನ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿದ ಕ್ರಮ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಮಾಡಿದ ನ್ಯಾಯಾಲಯ, ಸರ್ಕಾರಕ್ಕೆ ಈ ಆದೇಶ ನೀಡಿದೆ.ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆಂಜನೇಯ ರೆಡ್ಡಿ, ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಸುಧಾಕರ್ ನೇಮಕವನ್ನ ಪ್ರಶ್ನೆ ಮಾಡಿದ್ದರು.
ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗುವ ಶೈಕ್ಷಣಿಕ ಅರ್ಹತೆ ಸುಧಾಕರ್ ಅವರಿಗೆ ಇಲ್ಲ. ಅವರನ್ನ ನೇಮಕ ಮಾಡುವಾಗ ಸುಪ್ರೀಂ ಕೋರ್ಟ್ನ ಮಾರ್ಗ ಸೂಚಿಗಳನ್ನ ಸಹ ಪಾಲಿಸಿಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗುವವರು ಪರಿಸರ ಮಾಲಿನ್ಯ ನಿಯಂತ್ರಣದಲ್ಲಿ ವಿಜ್ಞಾನಿಗಳು ಅಥವಾ ಸಂಶೋಧನಾ ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ಹೊಂದಿರಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.
ಈ ಹಿಂದೆ ವಿಚಾರಣೆ ನಡೆಯುವಾಗ ಹೈಕೋರ್ಟ್, ಸುಧಾಕರ್ ನೇಮಕ ರದ್ದುಪಡಿಸಲು ಮುಂದಾಗಿತ್ತು. ಆ ಸಂಧರ್ಭದಲ್ಲಿ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಸರ್ಕಾರ ನೇಮಕವನ್ನ ಮರು ಪರಿಶೀಲನೆ ಮಾಡಲಿದೆ ಎಂದು ಭರವಸೆ ನೀಡಿದಾಗ ಹೈಕೋರ್ಟ್ ಅರ್ಜಿ ವಿಚಾರಣೆ ಮುಂದೂಡಿತ್ತು. ಇಂದು ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುವ ವೇಳೆ ಅಡ್ವೋಕೇಟ್ ಜನರಲ್ ಅವರು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಡಾ. ಸುಧಾಕರ್ ಸ್ವಯಂ ಪ್ರೇರಿತ ರಾಜೀನಾಮೆ ನೀಡಿದ್ದ ವರದಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಿದರು.
ಈ ವೇಳೆ ಸುಧಾಕರ್ ಅವರಿಂದ ತೆರವಾದ ಹುದ್ದೆಯನ್ನು ಶೀಘ್ರ ಭರ್ತಿ ಮಾಡಬೇಕು. ನೇಮಕ ವೇಳೆ ಸರ್ಕಾರ ಸುಪ್ರೀಂಕೋರ್ಟ್ ಆದೇಶವನ್ನು ಅನುಸರಿಸಬೇಕು ಎಂದು ಆದೇಶ ನೀಡಿದ ನ್ಯಾಯಾಲಯ, ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಮಾರ್ಗಸೂಚಿ ರಚನೆಯನ್ನ ಸರ್ಕಾರ ಮಾಡಲಿದೆ ಎಂಬ ವಿಶ್ವಾಸ ಹಾಗೂ ನಂಬಿಕೆ ಹೊಂದಿರುವುದಾಗಿ ತಿಳಿಸಿದೆ.