ಬೆಂಗಳೂರು:ಡಾ. ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯಕ್ಕೆ ಶಾಶ್ವತವಾಗಿ ಅನುದಾನ ರದ್ದುಪಡಿಸಿ 2008ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ನ್ಯಾಯಾಲಯದ ಸಮಯ ಹಾಳು ಮಾಡಿದ್ದಕ್ಕಾಗಿ ಅರ್ಜಿದಾರರಿಗೆ 10 ಸಾವಿರ ರೂ. ದಂಡ ವಿಧಿಸಿದೆ.
ಈ ಕುರಿತು ಬಿ.ಮುರಳೀಧರ ಹಾಗೂ ಇತರೆ 9 ಮಂದಿ 2012ರಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ವಿಚಾರಣೆ ನಡೆಸಿ ವಜಾಗೊಳಿಸಿದೆ. ಒಂದೇ ಕೋರಿಕೆಗೆ ಎರಡು ಬಾರಿ ಅರ್ಜಿಗಳನ್ನು ದಾಖಲಿಸಿ ಮತ್ತು 2012ರಿಂದ ಪ್ರಕರಣವನ್ನು ಮುಂದುವರೆಸಿಕೊಂಡು ಬಂದು ಕೋರ್ಟ್ ಸಮಯ ಹಾಳು ಮಾಡಿದ್ದಾರೆ ಎಂಬ ಕಾರಣಕ್ಕೆ ಅರ್ಜಿದಾರರಿಗೆ 10 ಸಾವಿರ ರೂ. ದಂಡ ವಿಧಿಸಿ, ಅರ್ಜಿ ವಜಾಗೊಳಿಸಿದೆ.
ಪ್ರಕರಣದ ಹಿನ್ನೆಲೆ:
ಡಾ. ಟಿಎಂಎ ಪೈ ಪ್ರತಿಷ್ಠಾನದ ವತಿಯಿಂದ ಉಡುಪಿಯಲ್ಲಿ ನಡೆಸಲಾಗುತ್ತಿರುವ ಡಾ. ಟಿಎಂಎ ಪೈ ಶಿಕ್ಷಣ ಮಹಾವಿದ್ಯಾಲಯ 1977ರಿಂದ ಸರ್ಕಾರದ ಅನುದಾನ ಸಂಹಿತೆಗೆ ಒಳಪಟ್ಟಿತ್ತು. ಆದರೆ ಸರ್ಕಾರಕ್ಕೆ ಭಾರವಾಗಬಾರದು ಎಂಬ ನಿರ್ಧಾರಕ್ಕೆ ಬಂದ ಸಂಸ್ಥೆಯು ಸರ್ಕಾರದ ಅನುದಾನ ಸಂಹಿತೆಯಿಂದ ಹೊರಬರಲು ತೀರ್ಮಾನಿಸಿ ‘ನೀತಿ ನಿರ್ಣಯ’ ಕೈಗೊಂಡಿತು. ಅದರಂತೆ ಮಹಾವಿದ್ಯಾಲಯಕ್ಕೆ ಶಾಶ್ವತ ಅನುದಾನ ರದ್ದುಪಡಿಸಿ ರಾಜ್ಯ ಸರ್ಕಾರ 2008ರ ಡಿ. 3ರಂದು ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ವಿವಿಯ ಉಪನ್ಯಾಸಕ ಬಿ.ಮುರಳೀಧರ ಸೇರಿ ಇತರೆ ಹುದ್ದೆಗಳಲ್ಲಿದ್ದವರು ಹೈಕೋರ್ಟ್‌ಗೆ 2009ರಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು.