ಬೆಂಗಳೂರು: ರಾಜ್ಯ ಸರ್ಕಾರದಿಂದ ದಿ. ಪುನೀತ್ ರಾಜ್ಕುಮಾರ್ ಅವರ ಹೆಸರಿನಲ್ಲಿ ಶಾಶ್ವತವಾದ ಯೋಜನೆಯೊಂದನ್ನು ಜಾರಿಗೊಳಿಸಬೇಕೆಂದು ಮುಖ್ಯಮಂತ್ರಿಗಳಿಗೆ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕ ಅಧ್ಯಕ್ಷ ಎನ್.ಆರ್. ರಮೇಶ್ ಮನವಿ ಪತ್ರ ಸಲ್ಲಿಸಿದ್ದಾರೆ.
ಅತ್ಯಂತ ಸದೃಢರಾಗಿದ್ದ ಪುನೀತ್ ರಾಜ್ಕುಮಾರ್ ಅವರಿಗೆ ಹೃದಯಾಘಾತವಾಗಿ ಅಕ್ಟೋಬರ್ 29ರಂದು ನಮ್ಮನ್ನು ಅಗಲಿದ್ದಾರೆ. ಆದರೆ, ಅಂದು ಅವರಿಗೆ ಸ್ವಲ್ಪ ಎದೆ ನೋವು ಕಾಣಿಸಿಕೊಂಡ ನಂತರ ಅವರ ಕುಟುಂಬದ ವೈದ್ಯರ ಸಲಹೆಯಂತೆ ಪುನೀತ್ ರಾಜ್ ಕುಮಾರ್ ಅವರು ಸದಾಶಿವನಗರದ ಮನೆಯಿಂದ ಕೇವಲ 1.5 ಕಿ.ಮೀ. ದೂರದಲ್ಲೇ ಇದ್ದಂತಹ ವಿಕ್ರಂ ಆಸ್ಪತ್ರೆಗೆ ತಲುಪಲು ಸುಮಾರು 45 ನಿಮಿಷ ಕಾಲಾವಕಾಶ ಹಿಡಿದಿತ್ತು. ಅದಕ್ಕೂ 10 ನಿಮಿಷಗಳ ಮುಂಚಿತವಾಗಿ ಅವರು ವಿಕ್ರಂ ಆಸ್ಪತ್ರೆಯನ್ನು ತಲುಪಲು ಸಾಧ್ಯವಾಗಿದ್ದಿದ್ದರೆ ಖಂಡಿತವಾಗಿಯೂ ಅವರ ಜೀವ ಉಳಿಯುತ್ತಿತ್ತು ಎಂದಿದ್ದಾರೆ.
ಮುಂದೆ ರಾಜ್ಯದಲ್ಲಿ ಸಂಚಾರ ದಟ್ಟಣೆಯಿಂದ ಇಂತಹ ಯಾವುದೇ ದುರ್ಘಟನೆಗಳು ನಡೆಯಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಅಧೀನದಲ್ಲಿರುವ ಎಲ್ಲ 108 ಆ್ಯಂಬುಲೆನ್ಸ್ಗಳು ಮತ್ತು ಖಾಸಗಿ ಆಸ್ಪತ್ರೆಗಳ ಆ್ಯಂಬುಲೆನ್ಸ್ಗಳಿಗೆ ರೋಗಿಯ ಮನೆಯಿಂದ ರೋಗಿಯು ತಲುಪಬೇಕಾದ ಆಸ್ಪತ್ರೆಯ ಮಾರ್ಗದ ಬಗ್ಗೆ ಆಯಾ ಆ್ಯಂಬುಲೆನ್ಸ್ಗಳಲ್ಲಿ LED ಪರದೆಗಳಲ್ಲಿ ಮೂಡುವ ಹಾಗೆ ಮತ್ತು ಆ್ಯಂಬುಲೆನ್ಸ್ನ ಧ್ವನಿವರ್ಧಕಗಳಲ್ಲಿ ತಾವು ತಲುಪಬೇಕಿರುವ ಆಸ್ಪತ್ರೆಯ ಬಗ್ಗೆ ಮತ್ತು ರೋಗಿಯ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿಸುವಂತಹ ವ್ಯವಸ್ಥೆಯನ್ನು ಮಾಡಬೇಕಿರುವುದು ಅನಿವಾರ್ಯವಾಗಿದೆ.