ಬೆಂಗಳೂರು :ಮನಸ್ಸಿಟ್ಟು ಕೆಲಸ ಮಾಡುವ ಕಟ್ಟ ಕಡೆಯ ಕಾರ್ಯಕರ್ತನಿಗೂ ಬಿಜೆಪಿಯಲ್ಲಿ ನಾಯಕರಾಗಲು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗುತ್ತದೆ. ಇದು ಬಿಜೆಪಿಯಲ್ಲಿ ಮಾತ್ರ ಸಾಧ್ಯವಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದೀಖ್ ತಿಳಿಸಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಇಂದು ನಡೆದ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದ ವಿಕಾಸಕ್ಕಾಗಿ ನಾವು ಶ್ರಮಿಸಬೇಕು. ಸರ್ಕಾರದ ಉತ್ತಮ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು ಎಂದು ಮನವಿ ಮಾಡಿದರು.
ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಬಿಜೆಪಿ ಗರಿಷ್ಠ ಪ್ರಮಾಣದಲ್ಲಿ ಶ್ರಮಿಸುತ್ತಿದೆ. ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಇತರ ಪಕ್ಷಗಳು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ. ಕೇವಲ ಕೌಟುಂಬಿಕ ರಾಜಕಾರಣ ಮಾಡುತ್ತಿವೆ ಎಂದು ಅವರು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೂರದೃಷ್ಟಿಯ ನಾಯಕ ಎಂಬುದನ್ನು ಜಗತ್ತು ಒಪ್ಪಿದೆ. ಭಾರತೀಯ ಜನತಾ ಪಾರ್ಟಿಯು ನರೇಂದ್ರ ಮೋದಿ ಅವರ ಶ್ರೇಷ್ಠ ನಾಯಕತ್ವದಲ್ಲಿ ದೇಶದ ಎಲ್ಲರ ಒಳಿತು ಹಾಗೂ ಅಭಿವೃದ್ಧಿಗೆ ಕಾರ್ಯ ನಿರ್ವಹಿಸುತ್ತಿದೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಚಿಂತನೆಯನ್ನು ಸಾಕಾರಗೊಳಿಸಲು ಅದು ಶ್ರಮಿಸುತ್ತಿದೆ ಎಂದರು.