ಕರ್ನಾಟಕ

karnataka

ETV Bharat / city

ರಾಜ್ಯ ವಿರೋಧಿ ರಾಷ್ಟ್ರೀಯವಾದ ಸಹಿಸಲಸಾಧ್ಯ, ಕೂಡಲೇ ಎಂಇಎಸ್ ನಿಷೇಧಿಸಬೇಕು : ಹೆಚ್​ಡಿಕೆ ಆಗ್ರಹ - ಎಂಇಎಸ್‌

"ಸಂಯುಕ್ತ ಮಹಾರಾಷ್ಟ್ರಕ್ಕೆ ಬೆಳಗಾವಿ ರಕ್ತ ಹೋರಾಟದ ಮುನ್ನುಡಿ ಬರೆದಿದೆ" ಎಂದು ಉದ್ರೇಕಕಾರಿ ಬರಹ ಬರೆದ ಶುಭಂ ಶೆಳಕೆ ವಿರುದ್ಧ ಭಯೋತ್ಪಾದಕ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಬೇಕು ಎಂದು ಮಾಜಿ ಸಿಎಂ ಹೆಚ್‌ಡಿಕೆ ಆಗ್ರಹಿಸಿದ್ದಾರೆ..

Former CM H.D.Kumaraswamy
ಮಾಜಿ ಮುಖ್ಯಮಂತ್ರಿ ಹೆಚ್​.ಡಿ.ಕುಮಾರಸ್ವಾಮಿ

By

Published : May 2, 2022, 2:20 PM IST

ಬೆಂಗಳೂರು : ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿದ್ದಾಗಲೇ ರಾತ್ರೋರಾತ್ರಿ ʼಭಯೋತ್ಪಾದಕ ದಾಳಿʼ ನಡೆಸಿ ಹಿಂಸಾಕಾಂಡ ಸೃಷ್ಟಿಸಿದ್ದ ನಮ್ಮ ಹೆಮ್ಮೆಯ ವೀರಪುತ್ರ ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿಯನ್ನು ವಿರೂಪಗೊಳಿಸಿದ್ದ ಎಂಇಎಸ್‌ ಕಿರಾತಕರ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರ ಮೃದುಧೋರಣೆ ತಾಳಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು (ಎಂಇಎಸ್‌) ನಿಷೇಧಿಸಿ ಎಂದು ಇಡೀ ಕರ್ನಾಟಕವೇ ಒಕ್ಕೊರಲಿನಿಂದ ಆಗ್ರಹ ಮಾಡಿತ್ತು. ಬಿಜೆಪಿ ಸರ್ಕಾರ ಅಸಡ್ಡೆ ತೋರಿದ ಪರಿಣಾಮ ಪುಂಡರು ಮತ್ತೆ ಬಾಲ ಬಿಚ್ಚಿದ್ದಾರೆ. ಭಾಷೆ-ಭಾಷೆಗಳ ಜನರ ನಡುವೆ ಬೆಂಕಿ ಹಚ್ಚುವ ಇವರು ಭಯೋತ್ಪಾದಕರು ಎಂದು ಕಿಡಿಕಾರಿದ್ದಾರೆ.

ಮಹಾರಾಷ್ಟ್ರ ದಿನದ ನೆಪದಲ್ಲಿ ಎಂಇಎಸ್‌ ಪುಂಡರು ನಾಡದ್ರೋಹ ಎಸಗಿದ್ದಾರೆ. ಕರ್ನಾಟಕದಲ್ಲೇ ಇದ್ದು ಕನ್ನಡ ನೆಲದ ವಿರುದ್ಧ ವಿಧ್ವಂಸಕ ಕೃತ್ಯ ಎಸಗಿರುವ ಶುಭಂ ಶೆಳಕೆ ಎಂಬ ಧೂರ್ತನು ಫೇಸ್‌ಬುಕ್‌ನಲ್ಲಿ ರಾಜ್ಯವನ್ನು ಒಡೆಯುವ ಸಂದೇಶ ಪೋಸ್ಟ್‌ ಮಾಡಿದ್ದಾನೆ. ವಿಡಿಯೋ ಮೂಲಕ ಕನ್ನಡಿಗರನ್ನು ಕೆಣಕಿದ್ದಾನೆ. ಕರ್ನಾಟಕದ ಭೂಪಟವನ್ನು ತಿರುಚಿ ಬೆಳಗಾವಿ, ನಿಪ್ಪಾಣಿ, ಕಾರವಾರ, ಬೀದರ್, ಭಾಲ್ಕಿಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿದ ರೀತಿಯ‌ ನಾಡದ್ರೋಹಿ ಗ್ರಾಫಿಕ್ ಮಾಡಿ ಅದನ್ನು ಪೋಸ್ಟ್‌ ಮಾಡಿರುವ ಶೆಳಕೆಗೆ ಛಳಿ ಬಿಡಿಸಬೇಕಿದೆ ಎಂದು ಹೇಳಿದ್ದಾರೆ.

"ಸಂಯುಕ್ತ ಮಹಾರಾಷ್ಟ್ರಕ್ಕೆ ಬೆಳಗಾವಿ ರಕ್ತ ಹೋರಾಟದ ಮುನ್ನುಡಿ ಬರೆದಿದೆ" ಎಂದು ಉದ್ರೇಕಕಾರಿ ಬರಹ ಬರೆದ ಅವನ ವಿರುದ್ಧ ಭಯೋತ್ಪಾದಕ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಬೇಕು. ಬೆಳಗಾವಿ ಗಲಾಟೆಯಲ್ಲಿ ಜೈಲು ಸೇರಿದ್ದ ಶುಭಂ ಶೆಳಕೆ, ಈಗ ರಾಜಾರೋಷವಾಗಿ ಓಡಾಡಿಕೊಂಡಿದ್ದಾನೆ ಎಂದರೆ ಏನರ್ಥ? ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕದಲ್ಲಿ ಕನ್ನಡಿಗರ ಸರ್ಕಾರ ಇದೆಯಾ? ಅಥವಾ ಮಹಾರಾಷ್ಟ್ರದ ಬಾಲಂಗೋಚಿ ಆಡಳಿತ ಉಂಟಾ? ತಲೆಯ ಮೇಲೆ ಕೇಸರಿ ಪೇಟ, ಭುಜದ ಮೇಲೆ ಕೇಸರಿಶಾಲು ಧರಿಸಿ ಪೋಸು ಕೊಡುವ ಎಂಇಎಸ್ ಪುಂಡರ ಮೇಲೆ ಪ್ರಕರಣ ದಾಖಲಿಸಲು ಬಿಜೆಪಿ ಸರ್ಕಾರದ ಮನಸ್ಸು ಒಪ್ಪುತ್ತಿಲ್ಲವಾ? ಇದನ್ನ ಸ್ಪಷ್ಟಪಡಿಸಲಿ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ಇರುವುದು ಒಂದೇ ಆಯ್ಕೆ. ಎಂಇಎಸ್ ಅನ್ನು ಕೂಡಲೇ ನಿಷೇಧಿಸಬೇಕು ಹಾಗೂ ಕಿಡಿಗೇಡಿ ಶೆಳಖೆಯನ್ನು ಬಂಧಿಸಿ ರಾಜ್ಯದಿಂದ ಹೊರ ಹಾಕಬೇಕು. ಇಲ್ಲವಾದರೆ ʼಬಿಜೆಪಿಯನ್ನು ಮಹಾರಾಷ್ಟ್ರ ಏಕೀಕರಣ ಸಮಿತಿಯ ಬಾಲʼ ಎನ್ನದೇ ವಿಧಿ ಇಲ್ಲ. ʼರಾಜ್ಯ ವಿರೋಧಿ ರಾಷ್ಟ್ರೀಯವಾದʼವನ್ನು ಕನ್ನಡಿಗರು ಎಂದೂ ಸಹಿಸುವುದಿಲ್ಲ ಎನ್ನುವುದನ್ನು ಬಿಜೆಪಿ ನೆನಪಿನಲ್ಲಿ ಇಟ್ಟುಕೊಂಡರೆ ಒಳ್ಳೆಯದು ಎಂದಿದ್ದಾರೆ.

ಇದನ್ನೂ ಓದಿ:ವಿವಾದಿತ ಪೋಸ್ಟ್ ಶೇರ್ ಮಾಡಿ ಮತ್ತೆ ಎಂಇಎಸ್ ಪುಂಡಾಟಿಕೆ

ABOUT THE AUTHOR

...view details