ಬೆಂಗಳೂರು:ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ತಿದ್ದುಪಡಿ ವಿಧೇಯಕ 2020 ವಿಧಾನಸಭೆಯಲ್ಲಿ ಅಂಗೀಕಾರ ಪಡೆಯಿತು. ಕಾಂಗ್ರೆಸ್-ಜೆಡಿಎಸ್ ಸದಸ್ಯರ ವಿರೋಧದ ಮಧ್ಯೆ ಮಸೂದೆಗೆ ಅಂಗೀಕಾರ ಪಡೆಯಲಾಯಿತು.
ಪ್ರತಿಪಕ್ಷಗಳ ಪ್ರತಿಭಟನೆ ನಡುವೆಯೇ ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಅಂಗೀಕಾರ! - anti cow slaughter bill passed in karnataka
20:24 December 09
18:21 December 09
ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ವಿರೋಧದ ನಡುವೆಯೂ ವಿಧಾನಸಭೆಯಲ್ಲಿ ಗೋ ಹತ್ಯೆ ನಿಷೇಧ ವಿಧೇಯಕ ಅಂಗೀಕಾರವಾಗಿದೆ.
ಚರ್ಚೆ ಇಲ್ಲದೆ ಗೋ ಹತ್ಯೆ ನಿಷೇಧ ವಿಧೇಯಕವನ್ನು ಅಂಗೀಕರಿಸಲಾಗಿದ್ದು, ಕಾನೂನು ಸಚಿವ ಮಾಧುಸ್ವಾಮಿ ವಿಧೇಯಕದ ಪ್ರಮುಖ ಅಂಶಗಳ ಬಗ್ಗೆ ವಿವರಣೆ ನೀಡಿದರು. ಈ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.
ಸದನದ ಪಾವಿತ್ರ್ಯತೆ ಹಾಳಾಗುತ್ತಿದೆ. ನಿಮ್ಮ ಸ್ಥಾನಕ್ಕೂ ಚ್ಯುತಿ ತರುತ್ತಿದ್ದಾರೆ. ಕಲಾಪ ಸಲಹಾ ಸಮಿತಿ ಸಭೆ ಮಾಡೋದೇಕೆ? ಬಿಎಸಿ ಸಭೆಯಲ್ಲಿ ಯಾವುದೇ ಬಿಲ್ ಇಲ್ಲ ಅಂತ ಹೇಳಿದ್ರಿ. ಬಿಲ್ ತರಬೇಕಾದರೆ ಅಜೆಂಡಾದಲ್ಲಿ ಹಾಕಬೇಕಿತ್ತು. ಬೆಳಗ್ಗೆ ಅಜೆಂಡಾದಲ್ಲಿ ಯಾಕೆ ಹಾಕಲಿಲ್ಲ? ನೀವು ಬಿಲ್ ತರಬೇಕಾದರೆ ಅಜೆಂಡಾದಲ್ಲಿ ಹಾಕಬೇಕು. ಹಿಂಬಾಗಿಲಿನಿಂದ ಏಕೆ ಬಿಲ್ ಮಂಡನೆ ಮಾಡುತ್ತಿದ್ದೀರಾ? ಎಂದು ಪ್ರತಿಪಕ್ಷಗಳ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ವಿಧೇಯಕ ಸಂಬಂಧ ನಾಳೆ ಚರ್ಚೆ ಮಾಡೋಣ ಎಂದು ಸಿದ್ದರಾಮಯ್ಯ ಆಗ್ರಹಿಸಿದರು. ಆದರೆ ಬಿಜೆಪಿ ಶಾಸಕರು ಇಂದೇ ಚರ್ಚೆ ಆಗಬೇಕು ಎಂದು ಒತ್ತಾಯಿಸಿದರು. ಈ ವೇಳೆ ಉಭಯ ನಾಯಕರ ನಡುವೆ ವಾಗ್ವಾದ ನಡೆಯಿತು. ಪ್ರತಿಭಟನೆ ಮಧ್ಯೆ ವಿಧೇಯಕಕ್ಕೆ ಅಂಗೀಕಾರ ಪಡೆಯಲಾಯಿತು.
ಕೇಸರಿ ಶಾಲು ಹಾಕಿ ಸದನದಲ್ಲಿ ಹಾಜರಾದ ಸಿಎಂ
ಗೋ ಹತ್ಯೆ ನಿಷೇಧ ವಿಧೇಯಕ ಮಂಡನೆ ಹಿನ್ನೆಲೆ ಕೇಸರಿ ಶಾಲು ಹಾಕಿ ಸಿಎಂ ಬಿಎಸ್ವೈ ಸದನದಲ್ಲಿ ಪಾಲ್ಗೊಂಡರು. ಬಿಜೆಪಿ ಶಾಸಕರು, ಸಚಿವರು ಕೇಸರಿ ಶಾಲು ಧರಿಸಿ ಸದನಕ್ಕೆ ಹಾಜರಾದರು. ಕೇಸರಿ ಶಾಲು ಧರಿಸಿದ್ದಕ್ಕೆ ಹೆಚ್.ಕೆ.ಪಾಟೀಲ್ ಕ್ರಿಯಾ ಲೋಪ ಎತ್ತಿದರು.
ನಿನ್ನೆ ಭಾರತ್ ಬಂದ್ ಹಿನ್ನೆಲೆ ನಾವು ಕಪ್ಪು ಪಟ್ಟಿ ಕಟ್ಟಿಕೊಂಡು ಬಂದಿದ್ದೆವು. ನಿಮ್ಮ ಮಾರ್ಷಲ್ ನಾವು ಹಾಕಿದ ಕಪ್ಪು ಪಟ್ಟಿ ತೆಗೆದು ಒಳಗೆ ಬಿಟ್ಟರು. ಇವತ್ತು ಬಿಜೆಪಿ ಶಾಸಕರು ಕೇಸರಿ ಶಾಲು ಹಾಕಿಕೊಂಡು ಬಂದಿದ್ದಾರೆ ಎಂದು ಹೆಚ್.ಕೆ.ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.