ಬೆಂಗಳೂರು: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಇದೀಗ ಪರ - ವಿರೋಧ ಚರ್ಚೆಗೆ ಕಾರಣವಾಗಿದೆ. ಅಂದಹಾಗೆ, ಮತಾಂತರ ನಿಷೇಧ ಕಾಯ್ದೆ ಮೂಲಕ ಜಾರಿಗೆ ತರಲು ಹೊರಟಿರುವ ನಿಯಮಗಳು ಮೇಲ್ನೋಟಕ್ಕೆ ಹೊಸದು ಎಂಬಂತೆ ಕಂಡು ಬಂದರೂ, ವಾಸ್ತವದಲ್ಲಿ ಅಸ್ಥಿತ್ವದಲ್ಲಿರುವ ನಿಯಮಗಳ ಹೊಸ ಮತ್ತು ಕಠಿಣ ರೂಪವೇ ಆಗಿವೆ.
ದೇಶದಲ್ಲಿ ವಾಸವಿರುವ ವಿದೇಶಿ ವ್ಯಕ್ತಿಯೂ ಸೇರಿದಂತೆ ಯಾವುದೇ ವ್ಯಕ್ತಿ ಯಾವುದೇ ಧರ್ಮಕ್ಕೆ ಸೇರುವ, ನಿರ್ದಿಷ್ಟ ಧರ್ಮವನ್ನು ಅನುಸರಿಸುವ, ಪ್ರತಿಪಾದಿಸುವ ಹಾಗೂ ಆಚರಿಸುವ ಹಕ್ಕನ್ನು ಮೂಲಭೂತ ಹಕ್ಕಾಗಿ ಸಂವಿಧಾನದ ವಿಧಿ 25ರ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಮೂಲಕ ನೀಡಿದೆ. ಹೀಗಾಗಿ ಯಾವುದೇ ವ್ಯಕ್ತಿ ತನಗಿಷ್ಟ ಬಂದ ಧರ್ಮ ಆಯ್ಕೆ ಮಾಡಿಕೊಳ್ಳಲು, ಆಚರಿಸಲು ಮುಕ್ತನಿದ್ದಾನೆ.
ಆದರೆ, ಆಮಿಷ, ಬಲವಂತ, ವಂಚನೆಗಳ ಮೂಲಕ ಓರ್ವ ವ್ಯಕ್ತಿಯನ್ನು ಮತಾಂತರ ಮಾಡುವುದು ಕಾನೂನಿನ ಅಡಿ ಅಪರಾಧವಾಗಿದೆ. ಈ ಅನುಚಿತ ಮತಾಂತರವನ್ನು ಹತ್ತಿಕ್ಕಲು ನೇರವಾಗಿ ಪ್ರಯೋಗಿಸುವಂತಹ ಕಾನೂನುಗಳು ರಾಜ್ಯದಲ್ಲಿಲ್ಲ. ಹೀಗಾಗಿಯೇ, ರಾಜ್ಯ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿದೆ.
ಅಸ್ಥಿತ್ವದಲ್ಲಿರುವ ನಿಯಮಗಳೇನು?
ಮತಾಂತರವನ್ನು ನಿಷೇಧಿಸಲು ರಾಜ್ಯವೂ ಸೇರಿದಂತೆ ದೇಶದೆಲ್ಲೆಡೆ ಅಸ್ಥಿತ್ವದಲ್ಲಿರುವ ಪ್ರಮುಖ ಕಾನೂನು ಭಾರತ ದಂಡ ಸಂಹಿತೆ -1860. ಕಾಯ್ದೆಯ ಸೆಕ್ಷನ್ 295ಎ ಹಾಗೂ 298 ಅಡಿ ಬಲವಂತದ ಮತಾಂತರ ಅಪರಾಧವಾಗಿದೆ. ಆದರೆ, ಈ ನಿಯಮಗಳು ಮತಾಂತರ ನಿಷೇಧವನ್ನು ನೇರವಾಗಿ ಹೇಳುವುದಿಲ್ಲ.
ಬದಲಿಗೆ ಸೆಕ್ಷನ್ 295 ಎ ದುರುದ್ದೇಶದಿಂದ ಮತ್ತು ಉದ್ದೇಶಪೂರ್ವಕವಾಗಿ ಯಾವುದೇ ವರ್ಗದ ಧಾರ್ಮಿಕ ನಂಬಿಕೆಗಳನ್ನು ಅಪಮಾನಿಸಿದರೆ ಅದು ಅಪರಾಧ ಎಂದು ಹೇಳುತ್ತದೆ. ಈ ಅಪರಾಧಕ್ಕೆ 3 ವರ್ಷದರೆಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಜೈಲು ಮತ್ತು ದಂಡ ಎರಡನ್ನೂ ವಿಧಿಸಬಹುದಾಗಿದೆ.
ಅದೇ ರೀತಿ ಸೆಕ್ಷನ್ 298 ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವಂತಹ ಮಾತು, ಸನ್ನೆ ಮಾಡುವುದನ್ನು ಅಪರಾಧ ಎನ್ನುತ್ತದೆ. ಈ ಅಪರಾಧಕ್ಕೆ ಒಂದು ವರ್ಷದವರೆಗೆ ಸೆರೆವಾಸ ಅಥವಾ ದಂಡ ಅಥವಾ ಜೈಲು-ದಂಡ ಎರಡನ್ನೂ ವಿಧಿಸಬಹುದಾಗಿದೆ. ಸದ್ಯಕ್ಕೆ ಮತಾಂತರ ಮಾಡಲು ಯತ್ನಿಸುವ ಮತ್ತು ಮಾಡುವ ಆರೋಪಗಳಿಗೆ ಈ ಸೆಕ್ಷನ್‌ಗಳ ಅಡಿಯಲ್ಲೇ ಶಿಕ್ಷೆ ವಿಧಿಸಲಾಗುತ್ತಿದೆ.
ಮತಾಂತರ ನಿಷೇಧ ಮಸೂದೆಯಲ್ಲಿ ಹೆಚ್ಚಿನ ಶಿಕ್ಷೆ
ಮತಾಂತರ ನಿಷೇಧಕ್ಕಾಗಿ ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ 'ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021' ರ ಕರಡು ಪ್ರತಿಯಲ್ಲಿ ಶಿಕ್ಷೆಯ ಪ್ರಮಾಣವನ್ನು ಗರಿಷ್ಠ ಮಟ್ಟಕ್ಕೆ ಹೆಚ್ಚಿಸಲಾಗಿದೆ.
ಬಲವಂತ, ಆಮಿಷ ಒಡ್ಡಿ ಮಾಡುವ ಮತಾಂತರಗಳಿಗೆ 10 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 50 ಸಾವಿರರೆಗೆ ದಂಡ ವಿಧಿಸಲು ಉದ್ದೇಶಿಸಲಾಗಿದೆ. ಎಸ್ಸಿ-ಎಸ್ಟಿ ಸಮುದಾಯದ ವ್ಯಕ್ತಿಗಳು, ಅಪ್ರಾಪ್ತರು, ಮಹಿಳೆಯರು, ಬುದ್ದಿಮಾಂದ್ಯರು ಸೇರಿದಂತೆ ದುರ್ಬಲ ವರ್ಗಗಳ ಮತಾಂತರಕ್ಕೆ ಕನಿಷ್ಠ 3 ವರ್ಷದಿಂದ ಗರಿಷ್ಠ 10 ವರ್ಷದವರೆಗೆ ಜೈಲು, 50 ಸಾವಿರವರೆಗೆ ದಂಡ ವಿಧಿಸುವ ನಿಯಮವನ್ನು ಮಸೂದೆ ಹೊಂದಿದೆ.
ಇನ್ನಿತರ ವ್ಯಕ್ತಿಗಳ ಮತಾಂತರಕ್ಕೆ ಗರಿಷ್ಠ 5 ವರ್ಷದವರೆಗೆ ಜೈಲು ಹಾಗೂ 25 ಸಾವಿರವರೆಗೆ ದಂಡ ವಿಧಿಸಬಹುದಾಗಿದೆ. ಸಾಮೂಹಿಕ ಮತಾಂತರ ಮಾಡಿದಲ್ಲಿ 3 ರಿಂದ 10 ವರ್ಷದವರೆಗೆ ಜೈಲು 1 ಲಕ್ಷದವರೆಗೆ ದಂಡ ವಿಧಿಸಲು ಅವಕಾಶವಿದೆ.