ಕರ್ನಾಟಕ

karnataka

ETV Bharat / city

'ಅನ್ನಭಾಗ್ಯ ಅಕ್ರಮ': ಮೂರು ವರ್ಷದಲ್ಲಿ ಈ ವರ್ಷವೇ ಹೆಚ್ಚು - ಅನ್ನಭಾಗ್ಯ ಯೋಜನೆ ಅಕ್ರಮಗಳ ವರದಿ

ವರದಿ ಪ್ರಕಾರ 2020-21ರಲ್ಲಿ 300 ಪ್ರಕರಣಗಳು ದಾಖಲಾಗಿವೆ. ಇನ್ನು 2018-19 ರಲ್ಲಿ 271 ಪ್ರಕರಣಗಳು ಹಾಗೂ 2019-20 ರಲ್ಲಿ 215 ಪ್ರಕರಣಗಳು ದಾಖಲಾಗಿದ್ದವು. ಒಟ್ಟಾರೆ ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ ಗಮನ ಹರಿಸಿದಾಗ ಹಿಂದುಳಿದ ಜಿಲ್ಲೆಯಾಗಿರುವ ಬಳ್ಳಾರಿಯಲ್ಲಿ ಅತಿಹೆಚ್ಚು ಅಂದರೆ ಒಟ್ಟು 181 ಪ್ರಕರಣಗಳು ಇಲ್ಲಿ ದಾಖಲಾಗಿವೆ.

anna-bhagya-scheme-illicit-raised-more
ಸಚಿವ ಉಮೇಶ ಕತ್ತಿ

By

Published : Mar 13, 2021, 7:21 PM IST

ಬೆಂಗಳೂರು: ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ 2020-21ನೇ ಸಾಲಿನಲ್ಲಿಯೇ ಅನ್ನಭಾಗ್ಯ ಯೋಜನೆಯಲ್ಲಿ ಅಕ್ರಮಗಳ ಪತ್ತೆ ಹೆಚ್ಚಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ ಕತ್ತಿ ತಿಳಿಸಿದ್ದಾರೆ.

ವಿಧಾನಪರಿಷತ್​ನಲ್ಲಿ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್ ಪ್ರಶ್ನೆಗೆ ಉತ್ತರಿಸಿದ ಸಚಿವರು, 2018-19 ರಿಂದ 2020-21ರ ನಡುವಿನ ಮೂರು ಆರ್ಥಿಕ ವರ್ಷದಲ್ಲಿ ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಮತ್ತು ಇತರ ಆಹಾರ ಧಾನ್ಯಗಳನ್ನು ಅಕ್ರಮವಾಗಿ ಸಂಗ್ರಹಿಸಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿದ್ದವರ ವಿರುದ್ಧ ದಾಖಲಾದ ಪ್ರಕರಣಗಳು ಹಾಗೂ ಅಕ್ರಮ ದಾಸ್ತಾನು ಪ್ರಮಾಣದ ವಿವರವನ್ನು ಅವರು ನೀಡಿದರು.

ವರದಿ ಪ್ರಕಾರ 2020-21ರಲ್ಲಿ 300 ಪ್ರಕರಣಗಳು ದಾಖಲಾಗಿವೆ. ಇನ್ನು 2018-19 ರಲ್ಲಿ 271 ಪ್ರಕರಣಗಳು ಹಾಗೂ 2019-20 ರಲ್ಲಿ 215 ಪ್ರಕರಣಗಳು ದಾಖಲಾಗಿದ್ದವು. ಒಟ್ಟಾರೆ ಕಳೆದ ಮೂರು ವರ್ಷಗಳಲ್ಲಿ ದಾಖಲಾದ ಪ್ರಕರಣಗಳ ಬಗ್ಗೆ ಗಮನ ಹರಿಸಿದಾಗ ಹಿಂದುಳಿದ ಜಿಲ್ಲೆಯಾಗಿರುವ ಬಳ್ಳಾರಿಯಲ್ಲಿ ಅತಿಹೆಚ್ಚು ಅಂದರೆ ಒಟ್ಟು 181 ಪ್ರಕರಣಗಳು ಇಲ್ಲಿ ದಾಖಲಾಗಿವೆ.

ಇನ್ನು ಚಾಮರಾಜನಗರದಲ್ಲಿ 54 ಬೀದರ್​ನಲ್ಲಿ 46 ಬೆಳಗಾವಿ 38 ಶಿವಮೊಗ್ಗ 29 ಮೈಸೂರು 41 ರಾಯಚೂರು 36 ಕಲಬುರ್ಗಿ 41 ಕೊಪ್ಪಳ 42 ಬಾಗಲಕೋಟೆ 43 ಸೇರಿದಂತೆ ಒಟ್ಟು 34 ಜಿಲ್ಲೆಗಳಿಂದ 786 ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ.

ವಶಪಡಿಸಿಕೊಂಡ ವಸ್ತುಗಳು ಏನಾಗಿವೆ?

ವಶಪಡಿಸಿಕೊಂಡ ಅಕ್ರಮ ದಾಸ್ತಾನು ಏನಾಗಿದೆ ಎಂಬ ಸದಸ್ಯರ ಪ್ರಶ್ನೆಗೆ ಉತ್ತರಿಸಿದ ಸಚಿವರು ಅಕ್ರಮ ದಾಸ್ತಾನನ್ನು ಅಗತ್ಯ ವಸ್ತುಗಳ ಕಾಯ್ದೆ 1955 ಅನ್ವಯ ವಶಪಡಿಸಿಕೊಂಡು ಅಗತ್ಯ ವಸ್ತು ಹಾಳಾಗದಂತೆ ತಕ್ಷಣವೇ ಸಾರ್ವಜನಿಕ ವಿತರಣಾ ಪದ್ಧತಿ ಮುಖಾಂತರ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಅಕ್ರಮ ದಾಸ್ತಾನುಗಾರರ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ವಿವರ ನೀಡಿರುವ ಸಚಿವರು, ಇಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ. ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ಸಹ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದರ ಜೊತೆಗೆ ದಂಡ ವಸೂಲಿಗೆ ಕ್ರಮ ಕೈಗೊಂಡು ನ್ಯಾಯಬೆಲೆ ಅಂಗಡಿಗಳ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ. ಅಲ್ಲದೇ ಈ ಪ್ರಕರಣಗಳು ಜಿಲ್ಲಾಧಿಕಾರಿಗಳ ನ್ಯಾಯಾಲಯ ಮತ್ತು ಇತರ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details