ಬೆಂಗಳೂರು: ಪ್ರಿಯಕರ ಮತ್ತೊಬ್ಬಳನ್ನು ವಿವಾಹವಾಗಿದ್ದಕ್ಕೆ ನೊಂದ ಅಂಗನವಾಡಿ ಶಿಕ್ಷಕಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ದಾಸರಹಳ್ಳಿಯಲ್ಲಿ ನಡೆದಿದೆ.
ದಾಸರಹಳ್ಳಿ ನಿವಾಸಿ ಆತ್ಮಹತ್ಯೆಗೆ ಶರಣಾದ ಯುವತಿ. ಈ ಸಂಬಂಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿ ಪ್ರಿಯಕರ ನಾಗೇಶ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ ಎಂದು ಮಾಗಡಿ ರಸ್ತೆ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಆತ್ಮಹತ್ಯೆಗೆ ಶರಣಾದ ಯುವತಿ ಅಂಗನವಾಡಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ತಾಯಿ ಹಾಗೂ ಸಹೋದರನ ಜತೆ ದಾಸರಹಳ್ಳಿಯಲ್ಲಿ ನೆಲೆಸಿದ್ದರು. ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ನಾಗೇಶ್ ಹಾಗೂ ಈಕೆ ಪರಸ್ಪರ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರಂತೆ. ಇವರಿಬ್ಬರ ಪ್ರೀತಿಗೆ ನಾಗೇಶ್ ಪೋಷಕರು ವಿರೋಧ ವ್ಯಕ್ತಪಡಿಸಿದ್ದರಂತೆ. ಅಲ್ಲದೆ ಹಲವು ಬಾರಿ ಮನವೊಲಿಸಲು ಪ್ರಯತ್ನಿಸಿದರೂ ನಾಗೇಶ್ ಪೋಷಕರು ಒಪ್ಪಿರಲಿಲ್ಲ ಎನ್ನಲಾಗಿದೆ.
ಒಂದು ತಿಂಗಳ ಹಿಂದೆ ನಾಗೇಶ್, ತನ್ನ ಪೋಷಕರು ತೋರಿಸಿದ್ದ ಯುವತಿಯನ್ನು ಮದುವೆಯಾಗಿದ್ದ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ತನ್ನ ವಿವಾಹದ ಫೋಟೋ ಹಾಕಿದ್ದ. ಇದನ್ನು ನೋಡಿದ ಶಿಕ್ಷಕಿ ಬೇಸರಗೊಂಡು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದಳಂತೆ. ತಾಯಿ ಕೂಡ ಈಕೆಗೆ ಸಮಾಧಾನದ ಮಾತುಗಳನ್ನು ಹೇಳಿದ್ದರಂತೆ.
ನಾಗೇಶ್‌ನನ್ನು ಮಾತನಾಡಿಸಿದಾಗ ಯಾವುದೇ ಸಂಬಂಧವಿಲ್ಲ ಎಂಬಂತೆ ಮಾತನಾಡಿದ್ದನಂತೆ. ಈ ಎಲ್ಲಾ ಕಾರಣಗಳಿಂದ ನೊಂದಿದ್ದ ಯುವತಿ ಶನಿವಾರ ಮಧ್ಯಾಹ್ನ 3 ಗಂಟೆಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಯಿ ಮನೆಗೆ ಮರಳಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸದ್ಯ ತನ್ನ ಸಾವಿಗೆ ನಾಗೇಶ್ ಕಾರಣ. ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆ ಎಂದು ಡೆತ್‌ನೋಟ್ ಬರೆದಿಟ್ಟಿದ್ದಾಳೆ. ಇದನ್ನು ಆಧರಿಸಿ ಆರೋಪಿ ನಾಗೇಶನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.