ಬೆಂಗಳೂರು :ಆನಂದ್ ಸಿಂಗ್ ಅವರು ಯಾವುದೇ ಕಾರಣಕ್ಕೂ ಬಿಜೆಪಿ ಬಿಡಲ್ಲ. ಮಂತ್ರಿ ಮಂಡಲದಲ್ಲಿ ಮುಂದುವರೆಯುತ್ತಾರೆ ಎಂದು ಕಂದಾಯ ಸಚಿವ ಆರ್ ಅಶೋಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಿನ್ನೆ ಮುಖ್ಯಮಂತ್ರಿಗಳ ಜೊತೆ ನಾವೆಲ್ಲಾ ಮಾತಾಡಿದ್ದೇವೆ. ಅವರು ಶಾಂತವಾಗಿದ್ದಾರೆ, ಸಿಎಂ ಬಸವರಾಜ ಬೊಮ್ಮಾಯಿ ಅವರು ಆನಂದ್ ಸಿಂಗ್ ಅವರನ್ನು ಮತ್ತೆ ಭೇಟಿ ಮಾಡಲಿದ್ದಾರೆ. ಅಸಮಾಧಾನವಿದ್ದರೆ ಸಮಸ್ಯೆಯನ್ನು ಸಿಎಂ ಬಗೆಹರಿಸ್ತಾರೆ ಎಂದರು.
ಆನಂದ್ ಸಿಂಗ್ ನನ್ನ ಆತ್ಮೀಯ ಸ್ನೇಹಿತರು. ಆನಂದ್‌ಸಿಂಗ್, ರಾಜೂಗೌಡ ಅವರು ಮುಖ್ಯಮಂತ್ರಿಗಳನ್ನ ಭೇಟಿ ಮಾಡ್ತಾರೆ. ಎರಡು ದಿನಗಳ ಹಿಂದೆ ಪೂರ್ಣಿಮಾ ಶ್ರೀನಿವಾಸ್ ಕೂಡ ನಮ್ಮ ಮನೆಗೆ ಬಂದಿದ್ರು. ಅವರಿಗೂ ಯಾವುದೇ ಅಸಮಾಧಾನ ಇಲ್ಲ ಎಂದು ಹೇಳಿದರು.
ಸಚಿವ ಆನಂದ್ ಸಿಂಗ್ ರಾಜೀನಾಮೆ ಕುರಿತಂತೆ ಮಿನಿಸ್ಟರ್ ಆರ್ ಅಶೋಕ್ ಪ್ರತಿಕ್ರಿಯೆ.. ಪ್ರೀತಂಗೌಡ ಮಾತನಾಡಿರುವುದು ಮುಗಿದ ಅಧ್ಯಾಯ. ಎಂಟಿಬಿ ನಾಗರಾಜ್ ಕೂಡ ನಮ್ಮ ಜತೆಯಲ್ಲೇ ಫ್ಲೈಟ್ ಹತ್ತಿದ್ರು. ಸೋತಿದ್ದರೂ ಕೂಡ ಎಂಎಲ್ಸಿ ಮಾಡಿ ಮಂತ್ರಿ ಮಾಡಿದ್ದೇವೆ. ಸಿಎಂ ಜಾಣ್ಮೆಯಿಂದ ಕೆಲಸ ಮಾಡ್ತಿದ್ದಾರೆ. ಸಿಎಂ ನಡೆ ಪಾಸಿಟಿವ್ ಆಗಿದೆ ಎಂದರು.
ವಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರ ಪತನವಾಗುತ್ತೆ ಅಂತಾ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್, ಹಿಂದೆ ನಾವು ಕೂಡ ಸಿದ್ದರಾಮಯ್ಯ ಸರ್ಕಾರ ಇರಲ್ಲ ಎಂದು ಗಿಣಿ ಶಾಸ್ತ್ರ ಹೇಳಿದ್ದೆವು.
ಎರಡು ವರ್ಷ, ಮೂರು ವರ್ಷದಲ್ಲಿ ಬೀಳುತ್ತೆ ಅಂತಾ ಹೇಳಿದ್ದೆವು. ಈಗ ವಿರೋಧ ಪಕ್ಷದಲ್ಲಿರೋರು ಪಾಪ ಏನು ಮಾಡ್ತಾರೆ. ಸರ್ಕಾರ ಒಳ್ಳೆಯದು ಮಾಡಿದ್ದರೂ, ಮಾಡಿದೆ ಅಂತಾ ಕಾಂಗ್ರೆಸ್ನವರು ಹೇಳ್ತಾರಾ ಎಂದು ಟಾಂಗ್ ನೀಡಿದರು.
ಕೆಲವು ಶಾಸಕರ ದೆಹಲಿ ಟೂರ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಭಿವೃದ್ಧಿ ವಿಚಾರ, ಕ್ಷೇತ್ರ ವಿಚಾರ, ಸ್ನೇಹದ ವಿಚಾರಕ್ಕೆ ಹೋಗಿದ್ದಾರೆ. ಕೇಂದ್ರ ಸರ್ಕಾರದ ಯೋಜನೆ ಅನುದಾನಕ್ಕೆ ಹೋಗಿದ್ದಾರೆ ಎಂದರು.