ಬೆಂಗಳೂರು: ಅರಣ್ಯ ಸಚಿವ ಆನಂದ್ ಸಿಂಗ್ ನಡೆಸಿರುವ ವಿವಿಧ ಹಗರಣಗಳ ವಿವರ ಹಾಗೂ ಅವರು ನಡೆಸಿರುವ 20,55,62,713 ರೂ ಮೊತ್ತದ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ದಾಖಲೆ ಬಿಡುಗಡೆ ಮಾಡಿದರು. ಆನಂದ್ ಸಿಂಗ್ ವಿರುದ್ಧ ದಾಖಲಾಗಿರುವ ವಿವಿಧ ಪ್ರಕರಣಗಳ ವಿವರಗಳನ್ನ ಬಿಚ್ಚಿಟ್ಟರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆನಂದ್ ಸಿಂಗ್ ಮೇಲೆ ಸುಪ್ರಿಂಕೋರ್ಟ್ ನಿರ್ದೇಶನ ರೀತಿ ವಿಶೇಷ ನ್ಯಾಯಾಲಯದಲ್ಲಿ 14 ಪ್ರಕರಣಗಳಿವೆ. ಆನಂದ್ ಸಿಂಗ್ ಅಪರಾಧ ಎಸಗಿರುವ ಇಲಾಖೆಯೇ ಮಾಹಿತಿ ನೀಡಿದೆ. ಬಿಜೆಪಿ ಪ್ರಾಮಾಣಿಕತೆಯ ಪ್ರತೀಕ ಎಂದು ಹೇಳಿಕೊಳ್ಳುತ್ತದೆ. ಈಗ ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪ ಕಣ್ಣಿಗೆ ಪಟ್ಟಿ ಕಟ್ಟಿಕೊಂಡ ಧೃತರಾಷ್ಟ್ರರಾಗಿದ್ದಾರೆ. ಯಡಿಯೂರಪ್ಪಗೆ ಅವರ ಸುತ್ತಮುತ್ತ ಇರುವವರು, ಅವರ ಮಕ್ಕಳು ಮಾತ್ರ ಕಾಣೋದು. ಉಳಿದ ವಿಚಾರಗಳು ಅವರ ಕಣ್ಣಿಗೆ ಕಾಣಿಸುವುದಿಲ್ಲ ಎಂದು ಟೀಕಿಸಿದರು.
ಏಳು ಪ್ರಕರಣಗಳಿಗೆ ಸಂಬಂಧಿಸಿದ 20 ಕೋಟಿ 55 ಲಕ್ಷ ಮೊತ್ತದ ಹಗರಣ ನಡೆಸಿದ್ದಾರೆ. ಇದು ತನಿಖೆಯಿಂದ ಸಾಬೀತಾಗಿ ಚಾರ್ಜ್ ಶೀಟ್ ದಾಖಲಾಗಿದೆ. ಈಗ ಆನಂದ್ ಸಿಂಗ್ ಜಾಮೀನಿನ ಮೇಲಿದ್ದಾರೆ. ಇಷ್ಟರ ಮಟ್ಟಿಗೆ ಆರೋಪಗಳಿದ್ದರೂ ಅವರಿಗೆ ಸಚಿವ ಸ್ಥಾನ ನೀಡಿರುವುದು ಸರಿನಾ? ಹಗರಣ ನಡೆಸಿದ ಇಲಾಖೆಗೆ ಸಚಿವಾರಾಗಿದ್ದಾರೆ. ಅಂತಹವರಿಂದ ಅರಣ್ಯ ಉಳಿಯಲು ಸಾಧ್ಯವೇ? ಅಧಿಕಾರಿಗಳು ತಮ್ಮ ಸಚಿವರ ವಿರುದ್ಧ ದಾಖಲೆ, ಹೇಳಿಕೆ ನೀಡಲು ಸಾಧ್ಯವೇ? ಪ್ರಧಾನಿ ಮೋದಿ ಉತ್ತರ ಕೊಡುತ್ತಾರೆಯೇ? ಎಂದು ಪ್ರಶ್ನಿಸಿದರು.
ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಒಟ್ಟು ಭೂಮಿಯಲ್ಲಿ ಶೇ.33 ರಷ್ಟು ಅರಣ್ಯ ಇರಬೇಕು. ಆದರೆ, ಶೇ.17ರಷ್ಟು ಅರಣ್ಯ ಮಾತ್ರ ಇದೆ. ಹೀಗಿರುವಾಗ ಇಂಥವರು ಸಚಿವರಾದರೆ ಹೇಗೆ ಎಂದು ಪ್ರಶ್ನಿಸಿದರು. ಆಧುನಿಕ ಧೃತರಾಷ್ಟ್ರ ಯಡಿಯೂರಪ್ಪ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಕ್ಯಾಸಿನೋ ಮಾಡ್ತೇನೆ ಎನ್ನುತ್ತಾರೆ ಒಬ್ಬ ಸಚಿವರು, ಕಡಿಮೆ ಬೆಲೆಗೆ ಹೆಂಡ ಹಂಚುತ್ತೇನೆ ಎನ್ನುತ್ತಾರೆ ಮತ್ತೊಬ್ಬ ಸಚಿವರು. ಜನರಿಗೆ ಮೂಲಸೌಕರ್ಯ ಕಲ್ಪಿಸಲಾಗದವರು, ಕ್ಯಾಸಿನೊ ತರಲು ಹೊರಟಿದ್ದಾರೆ. ಸರ್ಕಾರಕ್ಕೆ ಬುದ್ದಿ ಇದ್ದರೆ, ಬದ್ಧತೆ ಇದ್ದರೆ ಇಂತಹವರನ್ನು ಸಚಿವ ಸ್ಥಾನದಿಂದ ಕಿತ್ತು ಹಾಕಬೇಕು ಎಂದು ಒತ್ತಾಯಿಸಿದರು.