ಬೆಂಗಳೂರು: ಲಾಕ್ಡೌನ್ ವೇಳೆ ನಗರದ ಐಟಿ ಕಂಪನಿ ಹಾಗೂ ಕಾರ್ಖಾನೆಗಳಿಗೆ ಊಟ-ತಿಂಡಿ ಸರಬರಾಜು ಮಾಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿದ ಆರೋಪಡಿ ಅಮೃತಹಳ್ಳಿ ಪೊಲೀಸರು ಓರ್ವ ಮಹಿಳೆಯನ್ನು ಬಂಧಿಸಿದ್ದಾರೆ.
ಅಮೃತಹಳ್ಳಿಯ ನಿವಾಸಿ ನಂದಿನಿ ಬಂಧಿತ ಆರೋಪಿ. ಕೊರೊನಾ ಲಾಕ್ಡೌನ್ ಘೋಷಣೆ ಹಿನ್ನೆಲೆ ಹೋಟೆಲ್ ಹಾಗೂ ಅಂಗಡಿ-ಮುಂಗಟ್ಟುಗಳು ಸ್ತಬ್ಧವಾಗಿದ್ದವು. ಇದರಿಂದ ಐಟಿ ಕಂಪನಿ ಹಾಗೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಊಟ-ತಿಂಡಿ, ಕಾಫಿ-ಟೀ ಸಮಸ್ಯೆಯಾಗಿತ್ತು.
ಇದನ್ನೇ ಬಂಡವಾಳ ಮಾಡಿಕೊಂಡ ನಂದಿನಿ, ಕಂಪನಿಗಳಿಗೆ ತೆರಳಿ ಕಡಿಮೆ ದರದಲ್ಲಿ ಗುಣಮಟ್ಟದ ಆಹಾರ ನೀಡುವುದಾಗಿ ನಂಬಿಸಿ ಮುಂಗಡವಾಗಿ ಹಣ ಪಡೆಯುತ್ತಿದ್ದಳು. ಹಣ ಕೈಗೆ ಬರುತ್ತಿದ್ದಂತೆ ಯಾರ ಸಂಪರ್ಕಕ್ಕೂ ಸಿಗುತ್ತಿರಲಿಲ್ಲ ಎನ್ನಲಾಗಿದೆ.
ಇದೇ ತರಹ ಪ್ರತಿಷ್ಠಿತ ಕಂಪನಿಯೊಂದಕ್ಕೆ ಊಟ-ತಿಂಡಿ ಸರಬರಾಜು ಮಾಡುವುದಾಗಿ ನಂಬಿಸಿ ಮಾಲೀಕರಿಂದ 6 ಲಕ್ಷ ರೂಪಾಯಿ ಹಣ ಪಡೆದು ಟೋಪಿ ಹಾಕಿದ್ದಳಂತೆ. ಕಂಪನಿ ಮಾಲೀಕರು ಈ ಸಂಬಂಧ ಅಮೃತಹಳ್ಳಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ನಂದಿನಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಕೆಂಪಾಪುರದಲ್ಲೂ ಹಲವು ಜನರಿಗೆ ಕಾಯಂ ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ರೂ. ಮುಂಗಡ ಹಣ ಪಡೆದು ವಂಚಿಸಿರುವ ಆರೋಪ ಕೇಳಿ ಬಂದಿದ್ದು, ಇದುವರೆಗೆ 50ರಿಂದ 60 ಮಂದಿಗೆ ಈಕೆ ವಂಚಿಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.