ಬೆಂಗಳೂರು :ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಎರಡು ದಿನಗಳ ರಾಜ್ಯ ಪ್ರವಾಸ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಲಿಗೆ ಅಕ್ಷರಶಃ ವರವಾಗಿ ಪರಿಣಮಿಸಿದೆ. ನಾಯಕತ್ವ ಬದಲಾವಣೆ ವಿವಾದಕ್ಕೆ ತೆರೆ ಬಿದ್ದಿದ್ದು, ಅತೃಪ್ತರಿಗೂ ಕಠಿಣ ಸಂದೇಶ ರವಾನೆಯಾಗಿದೆ. ಇದು ಒಂದು ರೀತಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಂತಾಗಿದೆ.
ಅಧಿಕಾರಕ್ಕೆ ಬಂದ ದಿನದಿಂದಲೂ ಕೇಳಿ ಬರುತ್ತಿದ್ದ ನಾಯಕತ್ವ ಬದಲಾವಣೆ ಕೂಗಿಗೆ ಬಿಜೆಪಿ ಹೈಕಮಾಂಡ್ ತೆರೆ ಎಳೆದಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಆದರೂ ಕೂಡ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರದ್ದೇ ಪಕ್ಷದಲ್ಲಿ ಬಹುತೇಕ ಅಂತಿಮ ನಿರ್ಧಾರ. ಪ್ರಧಾನಿ ಮೋದಿ ಸೇರಿ ಪಕ್ಷದ ಎಲ್ಲ ನಾಯಕರೂ ಅಮಿತ್ ಶಾ ನಿರ್ಧಾರ ಒಪ್ಪುತ್ತಾರೆ. ಅಂತಹ ಶಾ ಖುದ್ದಾಗಿ ರಾಜ್ಯದ ನಾಯಕತ್ವ ಬದಲಾವಣೆ ವಿವಾದಕ್ಕೆ ತೆರೆ ಎಳೆದಿದ್ದಾರೆ.
ಜ. 16 ಮತ್ತು 17ರಂದು ಎರಡು ದಿನಗಳ ಕಾಲ ಕೇಂದ್ರ ಗೃಹ ಸಚಿವರು ರಾಜ್ಯ ಪ್ರವಾಸ ನಡೆಸಿದ್ದರು. ಸರ್ಕಾರಿ ಕಾರ್ಯಕ್ರಮಗಳು ಹಾಗೂ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು. ಎಲ್ಲಾ ಕಡೆಯಲ್ಲಿಯೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕೈ ಬಲಪಡಿಸುವ ರೀತಿಯ ಹೇಳಿಕೆ ನೀಡಿದ್ದಾರೆ.
ಕೊರೊನಾ ವೇಳೆ ಬಿಎಸ್ವೈ ಸರ್ಕಾರ ಕೈಗೊಂಡ ಕ್ರಮಗಳಿಗೆ ಶಹಬ್ಬಾಸ್ ಗಿರಿ ನೀಡಿದ್ದಾರೆ. ಆರ್ಥಿಕ ಸಂಕಷ್ಟದ ನಡುವೆಯೂ ಉತ್ತಮ ಆಡಳಿತ ಕೊಟ್ಟಿದ್ದಾರೆ ಎಂದು ಮುಕ್ತ ಕಂಠದಿಂದ ಹಾಡಿ ಹೊಗಳಿದ್ದಾರೆ.
ಇನ್ನೂ ಎರಡೂವರೆ ವರ್ಷ ಯಡಿಯೂರಪ್ಪ ಮುಖ್ಯಮಂತ್ರಿ ಆಗಿರಲಿದ್ದಾರೆ, ಬಿಜೆಪಿ ಸರ್ಕಾರವೇ ಇರಲಿದೆ, ಮುಂದಿನ ಚುನಾವಣೆಯಲ್ಲಿಯೂ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ನಿರ್ವಹಿಸಿ ಎಂದು ಕರೆ ನೀಡುವ ಮೂಲಕ ಯಡಿಯೂರಪ್ಪ ನಾಯಕತ್ವ ಅಬಾಧಿತ ಎನ್ನುವ ಸಂದೇಶ ಸಾರಿದ್ದಾರೆ.
ಓದಿ-ಮೋದಿ, ಅಮಿತ್ ಶಾ ಬಾಯಿಬಿಟ್ಟರೆ ಸುಳ್ಳು ಹೇಳುತ್ತಾರೆ: ಸಿದ್ದರಾಮಯ್ಯ
ಬಿಜೆಪಿ ಕೋರ್ ಕಮಿಟಿ ವಿಶೇಷ ಸಭೆಯಲ್ಲಿ ರಾಜ್ಯ ನಾಯಕರನ್ನೇ ಅಮಿತ್ ಶಾ ತರಾಟೆ ತೆಗೆದುಕೊಂಡಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪದೇಪದೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಹೇಳಿಕೆ ನೀಡುತ್ತಿದ್ದರೂ ನೀವೇಕೆ ಮೌನವಾಗಿದ್ದೀರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿ ಕೋರ್ ಕಮಿಟಿ ಸದಸ್ಯರನ್ನು ಪ್ರಶ್ನಿಸಿದ್ದಾರೆ.
ಅಲ್ಲದೆ, ಮುಖ್ಯಮಂತ್ರಿಗಳನ್ನು ಪದೇಪದೆ ಟೀಕಿಸುವುದು ಸರಿಯಲ್ಲ, ಈ ವಿಚಾರದಲ್ಲಿ ಪಕ್ಷ ಸಿಎಂ ಬೆನ್ನಿಗೆ ನಿಲ್ಲಬೇಕು ಎಂದು ತಾಕೀತು ಮಾಡಿದ್ದಾರೆ. ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಅಸಮಾಧಾನವಿದ್ದರೆ ಪಕ್ಷದ ವೇದಿಕೆಯಲ್ಲಿ ಹೇಳಿಕೊಳ್ಳಬೇಕು. ಅದರ ಬದಲು ಬಹಿರಂಗ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರವನ್ನುಂಟು ಮಾಡಿದ್ರೆ ಶಿಸ್ತುಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದಾರೆ.
ಯತ್ನಾಳ್ ವಿರುದ್ಧ ಅಮಿತ್ ಶಾ ನೀಡಿದ ಹೇಳಿಕೆ ನಾಯಕತ್ವ ಬದಲಾವಣೆ ಕೂಗು ಎಬ್ಬಿಸುತ್ತಿದ್ದವರನ್ನು ತಬ್ಬಿಬ್ಬುಗೊಳಿಸಿದೆ. ಅಲ್ಲದೆ ಅಸಮಾಧಾನಿತರ ಬಂಡಾಯಕ್ಕೂ ಬ್ರೇಕ್ ಹಾಕಿದಂತಾಗಿದೆ. ಒಂದು ರೀತಿಯಲ್ಲಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಂತೆ ಅಮಿತ್ ಶಾ ರಾಜ್ಯ ಪ್ರವಾಸ ನಾಯಕತ್ವ ಬದಲಾವಣೆ ಕೂಗು ಮತ್ತು ಅತೃಪ್ತರ ಅಸಮಧಾನಕ್ಕೆ ಬ್ರೇಕ್ ಹಾಕಿದೆ.
ಓದಿ-ಉದ್ಧವ್ ಠಾಕ್ರೆ ಹೇಳಿಕೆ ಭಾರತೀಯ ಒಕ್ಕೂಟ ವ್ಯವಸ್ಥೆಗೆ ವಿರುದ್ಧ: ಬಿ.ಎಸ್.ಯಡಿಯೂರಪ್ಪ
ಅಮಿತ್ ಶಾ ಆಗಮನಕ್ಕೂ ಮೊದಲೇ ವೇದಿಕೆ ಸಜ್ಜು:ಅಮಿತ್ ಶಾ ರಾಜ್ಯ ಪ್ರವಾಸಕ್ಕೂ ಮೊದಲೇ ನಾಯಕತ್ವ ಬದಲಾವಣೆ ವಿಷಯದ ಕುರಿತು ಸ್ಪಷ್ಟ ಸಂದೇಶವನ್ನು ಜನತೆಗೆ, ಕಾರ್ಯಕರ್ತರಿಗೆ ರವಾನಿಸಬೇಕು ಎನ್ನುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಪ್ಲಾನ್ ಸಕ್ಸಸ್ ಆಗಿದೆ. ಕಳೆದ ವರ್ಷದಿಂದ ಆಗಾಗ ನಾಯಕತ್ವ ಬದಲಾವಣೆ ಕೂಗು ಕೇಳಿ ಬರುತ್ತಿದ್ದರೂ ಮೌನವಾಗಿದ್ದ ಸಿಎಂ ಒಂದೇ ಒಂದು ಹೇಳಿಕೆ ನೀಡಿರಲಿಲ್ಲ.
ಆದರೆ, ಶಿವಮೊಗ್ಗದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆ ನಂತರ ಮೊದಲ ಬಾರಿ ಸಿಎಂ ನಾಯಕತ್ವ ಬದಲಾವಣೆ ಕುರಿತು ಪ್ರತಿಕ್ರಿಯೆ ನೀಡಿದ್ದರು. ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ನಾಯಕತ್ವ ಬದಲಾವಣೆ ಇಲ್ಲ, ಪೂರ್ಣಾವಧಿಗೆ ನಾನೇ ಸಿಎಂ ಎಂದು ಪ್ರಕಟಿಸಿ ವಿವಾದಕ್ಕೆ ತೆರೆ ಎಳೆದಿದ್ದರು.
ಇದಕ್ಕೂ ಮುನ್ನ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೂಡ ನಾಯಕತ್ವ ಬದಲಾವಣೆ ಕುರಿತು ಸ್ಪಷ್ಟೀಕರಣ ನೀಡಿದ್ದರು. ಬೆಂಗಳೂರು ಮತ್ತು ಶಿವಮೊಗ್ಗ ಎರಡೂ ಕಡೆಯಲ್ಲಿಯೂ ಸಿಎಂ ಯಡಿಯೂರಪ್ಪ ಆಡಳಿತವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದರು. ಯಡಿಯೂರಪ್ಪ ಅವರೇ ಉಳಿದ ಅವಧಿಗೂ ಮುಖ್ಯಮಂತ್ರಿ ಆಗಿರಲಿದ್ದಾರೆ ಎಂದು ಪ್ರಕಟಿಸಿದ್ದರು.
ಅಮಿತ್ ಶಾ ರಾಜ್ಯಕ್ಕೆ ಬರುವ ಮೊದಲೇ ಒಂದು ಹಂತಕ್ಕೆ ನಾಯಕತ್ವ ಬದಲಾವಣೆ ವಿಷಯಕ್ಕೆ ತೆರೆ ಎಳೆಯಲು ವೇದಿಕೆ ಸಜ್ಜುಗೊಳಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಪುಟ ಪುನಾರಚನೆ ವಿಷಯ ಕುರಿತು ವರಿಷ್ಠರೊಂದಿಗೆ ಚರ್ಚಿಸಲು ದೆಹಲಿಗೆ ತೆರಳಿದ್ದಾಗ ನಾಯಕತ್ವ ಬದಲಾವಣೆ ವಿವಾದದ ಹೇಳಿಕೆ ಕುರಿತು ಚರ್ಚಿಸಿದ್ದರು. ಖುದ್ದು ಅಮಿತ್ ಶಾ ಮುಂದೆಯೇ ಚರ್ಚೆ ನಡೆಸಿ ಇದಕ್ಕೆ ತೆರೆ ಎಳೆಯಲು ಮನವಿ ಮಾಡಿದ್ದರು.
ಇದೀಗ ಎರಡು ದಿನಗಳ ಅಮಿತ್ ಶಾ ರಾಜ್ಯ ಪ್ರವಾಸ ಮುಗಿದಿದೆ. ಎರಡೂ ದಿನಗಳ ಕಾಲ ರಾಜ್ಯದಲ್ಲಿ ಯಡಿಯೂರಪ್ಪ ನಾಯಕತ್ವ ಅಬಾಧಿತ, ಯಡಿಯೂರಪ್ಪ ಅವಧಿ ಪೂರ್ಣಗೊಳಿಸಲಿದ್ದಾರೆ ಎಂದು ಅಮಿತ್ ಶಾ ಹೇಳಿಕೆ ನೀಡುವ ಮೂಲಕ ನಾಯಕತ್ವ ಬದಲಾವಣೆ ಕುರಿತು ಹೇಳಿಕೆ ನೀಡುತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ.
ಬಿಎಸ್ವೈ ಇನ್ ಸೇಫ್ ಝೋನ್ : ಸದ್ಯದ ಮಟ್ಟಿಗೆ ಯಡಿಯೂರಪ್ಪ ನಾಯಕತ್ವ ಸೇಫಾಗಿದೆ. ಅಮಿತ್ ಶಾ ಖಡಕ್ ವಾರ್ನಿಂಗ್ ಮಾಡಿರುವ ಕಾರಣ ಕೆಲ ದಿನಗಳ ಕಾಲ ನಾಯಕತ್ವ ಬದಲಾವಣೆ ಕೂಗು ಎಬ್ಬಿಸುವುದಾಗಲಿ, ಬಂಡಾಯವೇಳುವುದಾಗಲಿ ಕಷ್ಟ ಸಾಧ್ಯ. ಅಲ್ಲದೆ ಬಹಿರಂಗ ಹೇಳಿಕೆ ನೀಡಿದ್ದಲ್ಲಿ ಶಿಸ್ತುಕ್ರಮದ ಎಚ್ಚರಿಕೆ ನೀಡಿರುವ ಕಾರಣ ರೆಬೆಲ್ ಚಟುವಟಿಕೆಗೂ ಬ್ರೇಕ್ ಬಿದ್ದಿದೆ. ಹಾಗಾಗಿ ಖಾತೆ ಹಂಚಿಕೆ ಬಜೆಟ್ ಮಂಡನೆಯನ್ನು ಸಿಎಂ ಯಡಿಯೂರಪ್ಪ ನಿರಾತಂಕವಾಗಿ ಮಾಡಬಹುದಾಗಿದೆ.