ಬೆಂಗಳೂರಿಗೆ ಅಮಿತ್ ಶಾ ಆಪ್ತನ ರಹಸ್ಯ ಭೇಟಿ: ಆರ್ಎಸ್ಎಸ್ ಕಚೇರಿ ಹುಡುಕಲು ಪರದಾಟ - ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್
21:03 December 17
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಬೆಂಗಳೂರಿಗೆ ಆಗಮನ
ಬೆಂಗಳೂರು:ಕೇಂದ್ರ ಗೃಹ ಸಚಿವ ಅಮಿತ್ ಶಾ ಆಪ್ತರಾಗಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಯಾದವ್ ಸದ್ದಿಲ್ಲದೇ ಬೆಂಗಳೂರಿಗೆ ಭೇಟಿ ನೀಡಿ, ರಾಜ್ಯ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದ್ದಾರೆ.
ಸಂಜೆ ಚಾಮರಾಜ ಪೇಟೆಯಲ್ಲಿರುವ ಆರ್.ಎಸ್.ಎಸ್.ಕಚೇರಿ ಕೇಶವ ಕೃಪಾಕ್ಕೆ ಭೇಟಿ ನೀಡಿದ ಭೂಪೇಂದ್ರ ಯಾದವ್, ಸಂಘದ ನಾಯಕರ ಜೊತೆಗೆ ಮಾತುಕತೆ ನಡೆಸಿದ್ದಾರೆ. ರಾಜ್ಯ ರಾಜಕೀಯ ವಿದ್ಯಾಮಾನಗಳ ಹಿನ್ನೆಲೆಯಲ್ಲಿ ರಹಸ್ಯ ಭೇಟಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಸಚಿವ ಸಂಪುಟ ವಿಸ್ತರಣೆ ಗೊಂದಲ ಮುಂದುವರೆದಿರುವುದು, ಪಕ್ಷದಲ್ಲಿ ಅಸಮಾಧಾನದ ಹೊಗೆ ಎದ್ದಿರುವುದು, ನಾಯಕತ್ವ ಬದಲಾವಣೆ ಕುರಿತು ಪದೇ ಪದೆ ಕೇಳಿ ಬರುತ್ತಿರುವ ವದಂತಿಗಳ ಹಿನ್ನೆಲೆಯಲ್ಲಿ ವಿಸ್ತೃತವಾಗಿ ಆರ್.ಎಸ್.ಎಸ್.ನಾಯಕರ ಜೊತೆ ಮಾತುಕತೆ ನಡೆಸಿ ಅಭಿಪ್ರಾಯ ಸಂಗ್ರಹ ಮಾಡಿ ಹೈಕಮಾಂಡ್ಗೆ ಸಲ್ಲಿಕೆ ಮಾಡಲಿದ್ದಾರೆ ಎನ್ನಲಾಗಿದೆ.
ಸಾಮಾನ್ಯವಾಗಿ ರಾಷ್ಟ್ರೀಯ ನಾಯಕರು ಯಾರೇ ರಾಜ್ಯಕ್ಕೆ ಆಗಮಿಸಿದರೂ ರಾಜ್ಯ ಬಿಜೆಪಿ ಕಚೇರಿಯಿಂದ ಮಾಹಿತಿ ನೀಡಲಾಗುತ್ತದೆ. ಆದರೆ, ಈ ಬಾರಿ ಬಿಜೆಪಿ ಕಚೇರಿಗೂ ಮಾಹಿತಿ ನೀಡದೇ ಭೂಪೇಂದ್ರ ಯಾದವ್ ನಗರಕ್ಕೆ ಆಗಮಿಸಿದ್ದಾರೆ. ಏಕಾಏಕಿ ಕೇಂದ್ರದ ನಾಯಕ ಯಾದವ್ ಭೇಟಿ ರಾಜ್ಯ ಬಿಜೆಪಿ ಪಾಳಯದಲ್ಲಿ ಸಂಚಲನ ಮೂಡಿಸಿದೆ. ಯಾವ ಸಂದೇಶ ಹೊತ್ತು ಬಂದಿದ್ದಾರೆ ಎನ್ನುವ ಕುತೂಹಲ ಗರಿಗೆದರಿದೆ.
ಆರ್ಎಸ್ಎಸ್ ಕಚೇರಿ ಹುಡುಕಲು ಪರದಾಡಿದ ಯಾದವ್:
ಹೈಕಮಾಂಡ್ ಸೂಚನೆ ಮೇರೆಗೆ ರಹಸ್ಯವಾಗಿ ಬೆಂಗಳೂರಿಗೆ ಬಂದಿರುವ ಭೂಪೇಂದ್ರ ಯಾದವ್ ಆರ್.ಎಸ್.ಎಸ್. ಕಚೇರಿಯನ್ನು ಸರಿಯಾಗಿ ಗುರುತಿಸಲು ಪರದಾಡಿದ ಸನ್ನಿವೇಶನ ನಡೆದಿದೆ.
ನಗರಕ್ಕೆ ಆಗಮಿಸಿದ ಭೂಪೇಂದ್ರ ಯಾದವ್ ಚಾಮರಾಜ ಪೇಟೆಗೆ ಹೋಗಿ ಆರ್.ಎಸ್.ಎಸ್ ಕಚೇರಿ ಕೇಶವಕೃಪಾವನ್ನು ಹುಡುಕಾಡಿದ್ದಾರೆ. ಕೇಶವಕೃಪಾ ಸಮೀಪವೇ ಹೋಗಿ ಹುಡುಕಾಡಿದ್ದಾರೆ. ಕೇಶವಕೃಪಾ ಸಮೀಪದ ಖಾದಿ ವಸ್ತ್ರಾಲಯ ಗ್ರಾಮೋದ್ಯೋಗ ಭಂಡಾರಕ್ಕೆ ಹೋಗಿ ಬೋರ್ಡ್ ನೋಡುತ್ತಿದ್ದ ಭೂಪೇಂದ್ರ ಯಾದವ್ ಬಳಿಕ, ಸ್ಥಳೀಯರನ್ನ ಕೇಳಿ ಪಕ್ಕದ ಕೇಶವಕೃಪಾಗೆ ತೆರಳಿದರು ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.