ಬೆಂಗಳೂರು: ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಏಪ್ರಿಲ್ 1ರಂದು ಬೆಂಗಳೂರಿಗೆ ಆಗಮಿಸಲಿರುವ ಹಿನ್ನೆಲೆ, ಅಂದು ನಡೆಯಲಿರುವ ಕಾರ್ಯಕ್ರಮಗಳ ರೂಪುರೇಷೆಗಳ ಕುರಿತು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರ ಅಧ್ಯಕ್ಷತೆಯಲ್ಲಿ ವಿಕಾಸಸೌಧದಲ್ಲಿ ಪೂರ್ವ ಸಿದ್ಧತಾ ಸಭೆ ನಡೆಯಿತು.
ಕೇಂದ್ರದಲ್ಲಿ ನೂತನವಾಗಿ ಸಹಕಾರ ಸಚಿವಾಲಯ ರಚನೆಯಾಗಿದ್ದು, ಸಹಕಾರ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲು ಅಮಿತ್ ಶಾ ಅವರು ಮುಂದಾಗಿದ್ದಾರೆ. ಹೀಗಾಗಿ ಸಹಕಾರ ಇಲಾಖೆಗೆ ನೆರವಾಗುವ ಕಾನೂನುಗಳಿಗೆ ತಿದ್ದುಪಡಿ ತರಲು ಸಲಹೆ ಸೂಚನೆಗಳನ್ನು ನೀಡಿದರೆ ಅದನ್ನು ಸಚಿವ ಅಮಿತ್ ಶಾ ಅವರ ಗಮನಕ್ಕೆ ತರಲಾಗುವುದು ಎಂದು ಸಹಕಾರಿಗಳಿಗೆ ತಿಳಿಸಿದರು.
ಸಹಕಾರ ಇಲಾಖೆಗೆ ಅಗತ್ಯವಿರುವ ನೆರವು, ಕಾನೂನು ತಿದ್ದುಪಡಿಗಳ ಪಟ್ಟಿ ಮಾಡಲಾಗಿದೆ. ಸಹಕಾರ ಕ್ಷೇತ್ರದಲ್ಲಿನ ಆದಾಯ ತೆರಿಗೆ ರದ್ದು ಮಾಡುವುದು, ನಬಾರ್ಡ್ ನಿಂದ ಮಂಜೂರಾಗುವ ಸಾಲದ ಮಿತಿ ಹೆಚ್ಚಳ, ಕೆಲವೊಂದು ಕಾಯ್ದೆಗೆ ತಿದ್ದುಪಡಿ ಮಾಡುವ ಬಗ್ಗೆ ಅಧಿಕಾರಿಗಳು ಪಟ್ಟಿ ಮಾಡಿದ್ದಾರೆ. ಇದರ ಹೊರತಾಗಿ ಮತ್ತೇನಾದರೂ ಬೇಡಿಕೆಗಳಿದ್ದರೆ ಕೂಡಲೇ ಸಲ್ಲಿಸುವಂತೆ ಸೂಚಿಸಿದರು.