ಕರ್ನಾಟಕ

karnataka

ETV Bharat / city

ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಪ್ರಶ್ನಿಸಿ ಅರ್ಜಿ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ - ಬೆಂಗಳೂರು

ಕರ್ನಾಟಕ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿರುವ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಮೋಟರು ವಾಹನ ಕಾಯ್ದೆಗೆ ತಿದ್ದುಪಡಿ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಲಾಗಿದೆ.

Amendment to the Motor Vehicle Act issue; high court notice to karnataka govt.
ಮೋಟರು ವಾಹನ ಕಾಯ್ದೆಗೆ ತಿದ್ದುಪಡಿ ಪ್ರಶ್ನಿಸಿ ಅರ್ಜಿ; ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

By

Published : Nov 17, 2021, 3:22 AM IST

ಬೆಂಗಳೂರು : ಹೊಸ ವಾಹನಗಳ ನೋಂದಣಿ ಜವಾಬ್ದಾರಿಯನ್ನು ಡೀಲರ್‌ಗಳಿಗೆ ವಹಿಸುವ ನಿಟ್ಟಿನಲ್ಲಿ ಕರ್ನಾಟಕ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದು ಸಾರಿಗೆ ಇಲಾಖೆ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಹೊಸ ವಾಹನಗಳನ್ನು ನೋಂದಣಿಯನ್ನು ಡೀಲರ್‌ಗಳಿಗೆ ವಹಿಸಿರುವ ಕ್ರಮ ಪ್ರಶ್ನಿಸಿ ಸಾರಿಗೆ ಇಲಾಖೆ 2021ರ ಅ.31ರಂದು ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆ ರದ್ದು ಕೋರಿ ಸಾರಿಗೆ ಇಲಾಖೆ ನಿವೃತ್ತ ಅಧಿಕಾರಿ ಮೊಹಮ್ಮದ್ ದಸ್ತಗೀರ್ ಸಲ್ಲಿಸಿರುವ ಅರ್ಜಿಯನ್ನು ನಿನ್ನೆ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಅರ್ಜಿದಾರರ ಪರ ವಕೀಲ ಪುತ್ತಗೆ ರಮೇಶ್ ವಾದ ಮಂಡಿಸಿ, ಹೊಸ ವಾಹನಗಳ ನೋಂದಣಿ ಜವಾಬ್ದಾರಿಯನ್ನು ವಾಹನ ಮಾರಾಟಗಾರರಿಗೆ ವಹಿಸಿರುವ ಸಾರಿಗೆ ಇಲಾಖೆ ಕ್ರಮ ಮೋಟರು ವಾಹನ ಕಾಯ್ದೆಗೆ ವಿರುದ್ಧವಾಗಿದೆ. ಸಾರ್ವಜನಿಕ ಹಿತದೃಷ್ಟಿಯಿಂದಲೂ ಸರಿಯಲ್ಲ. ಸಾರಿಗೆ ಇಲಾಖೆಯ ಈ ಕ್ರಮ ಟ್ರಾವೆಲ್ ಏಜೆನ್ಸಿಗಳಿಗೆ ಪಾಸ್ಪೋರ್ಟ್ ಹಾಗೂ ವೀಸಾ ವಿತರಿಸುವ ಹಕ್ಕು ನೀಡಿದಷ್ಟೇ ಅಪಾಯಕಾರಿ. ಆದ್ದರಿಂದ ಸಾರಿಗೆ ಇಲಾಖೆಯ ಅಧಿಸೂಚನೆ ರದ್ದುಪಡಿಸಬೇಕು ಎಂದು ಕೋರಿದರು.

ನೋಂದಣಿಗಳು ಅಂತಿಮ ಆದೇಶಕ್ಕೆ ಅನ್ವಯ:

ವಾದ ಆಲಿಸಿದ ಪೀಠ, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ, ಸಾರಿಗೆ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿ, ಅರ್ಜಿಗೆ ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು. ಈ ವೇಳೆ ಅರ್ಜಿದಾರರ ಪರ ವಕೀಲರು, ಸರ್ಕಾರದ ಪರ ವಕೀಲರು ಆಕ್ಷೇಪಣೆ ಸಲ್ಲಿಸುವುದರೊಳಗೆ ಡೀಲರ್‌ಗಳು ಸಾಕಷ್ಟು ವಾಹನಗಳನ್ನು ನೋಂದಣಿ ಮಾಡಿಕೊಡುವ ಸಾಧ್ಯತೆ ಇದೆ. ಅಂತಹ ವಾಹನಗಳನ್ನು ಹೊರ ರಾಜ್ಯಗಳಿಗೂ ತೆಗೆದುಕೊಂಡು ಹೋಗುವ ಸಾಧ್ಯತೆ ಇದೆ. ಹೀಗಾಗಿ ವಾಹನಗಳ ನೋಂದಣಿ ನ್ಯಾಯಾಲಯದ ಆದೇಶಕ್ಕೆ ಒಳಪಡುವಂತೆ ಮಧ್ಯಂತರ ಆದೇಶ ನೀಡಬೇಕು ಎಂದು ಕೋರಿದರು. ವಾದ ಪರಿಗಣಿಸಿದ ಪೀಠ, ಅಧಿಸೂಚನೆ ಅನ್ವಯ ಮಾಡುವ ನೋಂದಣಿಗಳು ಅರ್ಜಿಯ ಅಂತಿಮ ಆದೇಶಕ್ಕೆ ಒಳಪಟ್ಟಿರಲಿವೆ ಎಂದು ಮಧ್ಯಂತರ ಆದೇಶ ನೀಡಿ ವಿಚಾರಣೆ ಮುಂದೂಡಿತು.

ABOUT THE AUTHOR

...view details