ಬೆಂಗಳೂರು: ಕರ್ನಾಟಕ ನಾಗರಿಕ ಸೇವೆಗಳ ಕರಡು (ಕಾಲೇಜು ಶಿಕ್ಷಣ ಇಲಾಖೆಯ ಬೋಧನಾ ಸಿಬ್ಬಂದಿಯ ವರ್ಗಾವಣೆಯ ನಿಯಂತ್ರಣ) (ತಿದ್ದುಪಡಿ) 2021 ನಿಯಮಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.
ಈ ಪ್ರಕಾರ, ಬೋಧಕ ಸಿಬ್ಬಂದಿ ವರ್ಗಾವಣೆಗಾಗಿ ಕೋರಿದ್ದರೆ, ಅವರು ತಾವು ಕೆಲಸ ಮಾಡಿದ ಸ್ಥಳದಲ್ಲಿ ಒಂದು ವರ್ಷ ಹೆಚ್ಚುವರಿ ಬೋಧನೆ ಮಾಡಬೇಕು. ಹಾಗೇ, ವರ್ಗಾವಣೆ ಕೋರಿರುವವರಿಗೆ ವಲಯವಾರು, ವರ್ಗವಾರು ಪ್ರಕ್ರಿಯೆ ಮೂಲಕ ಪ್ರತ್ಯೇಕ ಪಟ್ಟಿ ಬಿಡುಗಡೆ ಮಾಡಲಾಗುವುದು ಅಂತ ಆದೇಶ ಹೊರಡಿಸಲಾಗಿದೆ.
ಒಂದು ವೇಳೆ ಇಬ್ಬರು ಬೋಧಕರು ಒಂದೇ ಸ್ಥಳದಲ್ಲಿ ಕೆಲಸ ನಿರ್ವಹಿಸಿದ್ದರೆ ಅಂತಹವರಿಗೆ ಸೇವಾ ಹಿರಿತನ ಆಧಾರದ ಮೇಲೆ ವರ್ಗಾವಣೆಯಲ್ಲಿ ಪ್ರಾಮುಖ್ಯತೆ ಕೊಡಲಾಗುತ್ತದೆ. ಈ ನಿಯಮಾವಳಿ ಪ್ರಕಾರ ವರ್ಗಾವಣೆ ಬಯಸುವ ಅಭ್ಯರ್ಥಿಗಳ ಪಟ್ಟಿಯನ್ನು ಕೌನ್ಸಿಲಿಂಗ್ ನಡೆಸುವ ಮೂಲಕ ಸಿದ್ಧಪಡಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವರ್ಗಾವಣೆ ನಿಯಮಾವಳಿಗೆ ತಿದ್ದುಪಡಿ ತರುವ ಮುನ್ನ ಕಳೆದ ಏಪ್ರಿಲ್ ಅಂತ್ಯದಲ್ಲಿ ಸಾರ್ವಜನಿಕರಿಂದ ಆಹ್ವಾನಿಸಲಾದ ಆಕ್ಷೇಪಣೆಗಳನ್ನು ಮತ್ತು ಸಲಹೆಗಳನ್ನು ಪರಿಗಣಿಸಿ ತಿದ್ದುಪಡಿ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.