ಬೆಂಗಳೂರು: ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಉದ್ದೇಶ ತುಳಿತಕ್ಕೊಳಗಾದವರಿಗೆ ನ್ಯಾಯ ಒದಗಿಸುವುದಾಗಿತ್ತು. ಆದರೆ, ಅಂಬೇಡ್ಕರ್ ಅವರನ್ನು ಇಂದು ಒಂದು ಜನಾಂಗಕ್ಕೆ ಸೀಮಿತ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಬಿಜೆಪಿ ಸದಸ್ಯ ಪ್ರಾಣೇಶ್ ಹೇಳಿದ್ದಾರೆ.
ವಿಧಾನಪರಿಷತ್ ನಲ್ಲಿ ಇಂದು ಸಂವಿಧಾನದ ಮೇಲಿನ ವಿಶೇಷ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಬೇಡ್ಕರ್ ಅವರನ್ನು ರಾಜ್ಯಸಭೆ ಅಥವಾ ಲೋಕಸಭೆಗೆ ಆಯ್ಕೆ ಮಾಡಬಹುದಿತ್ತು. ಆದರೆ, ಅವರನ್ನು ಸೋಲಿಸಲಾಯಿತು, ಇದು ದುರಂತ. ಅವರ ಜ್ಞಾನ ಬಳಸಿಕೊಳ್ಳಬಹುದಾಗಿತ್ತು. ಆ ಕೆಲಸ ಮಾಡಲಿಲ್ಲ ಎಂದು ವಿಷಾದಿಸಿದರು. ಸಂವಿಧಾನ ಕಾಂಗ್ರೆಸ್ ಆಡಳಿತ ಸಂದರ್ಭದಲ್ಲಿ ಎಪ್ಪತ್ತು ಬಾರಿ ತಿದ್ದುಪಡಿಯಾಗಿದೆ. ಆಗ ಪ್ರಶ್ನೆ ಮಾಡದವರು, ಈಗ ವಿರೋಧ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ಸಾಮಾಜಿಕ ನ್ಯಾಯ ಕೊಡಿಸಬೇಕು ಎಂದು ಅಂಬೇಡ್ಕರ್ ಅವರು ಹೋರಾಟ ಮಾಡಿದ್ದರು. ಆದರೆ, ನಾವು ಅದರಲ್ಲಿ ಎಷ್ಟು ಸಫಲರಾಗಿದ್ದೇವೆ?. ಅಂಬೇಡ್ಕರ್ ಆಶಯಗಳಿಗೆ ಎಲ್ಲಿ ನ್ಯಾಯ ಕೊಡಿಸಿದ್ದೇವೆ?. ಅಂಬೇಡ್ಕರ್ ಇದ್ದಾಗ ಬೆಲೆ ಕೊಡದೇ, ಅವರ ಮರಣದ ನಂತರ ಹಾಡಿ ಹೊಗಳಿದರೆ ಫಲವೇನು ಎಂದು ಮಾರ್ಮಿಕವಾಗಿ ನುಡಿದರು. ದೇಶ ವಿಭಜನೆ ಆದಾಗ ಪಾಕಿಸ್ತಾನದಲ್ಲಿ ಶೇ. 27ರಷ್ಟು ಹಿಂದುಗಳಿದ್ದರು. ಭಾರತದಲ್ಲಿ ಶೇ.4 ಮುಸ್ಲಿಮರಿದ್ದರು. ಆದರೆ, ಈಗ ಕೇವಲ ಶೇ.2ರಷ್ಟು ಮಾತ್ರ ಹಿಂದೂಗಳು ಪಾಕಿಸ್ತಾನದಲ್ಲಿದ್ದಾರೆ. ಭಾರತದಲ್ಲಿ ಶೇ.17ರಷ್ಟು ಮುಸ್ಲಿಂ ಸಮುದಾಯದ ಆಗಿದೆ. ಹಾಗಾದರೆ, ಉಳಿದವರು ಎಲ್ಲಿ ಹೋದರು ಎಂದು ಪ್ರಶ್ನಿಸಿದ ಅವರು, ಉಳಿದವರು ಬಂದರೆ, ಅವರಿಗೆ ಪೌರತ್ವ ಕೊಡಬೇಕೋ ಬೇಡವೋ ? ಎಂದರು.
ಭಾರತವನ್ನು ಗೌರವಿಸಲು ಸಂವಿಧಾನದಲ್ಲೇ ಹೇಳಲಾಗಿದೆ. ಭಾರತ ವಿರೋಧಿ ಘೋಷಣೆ ಕೂಗುವವರನ್ನು, ಕ್ರಿಕೆಟ್ ನಲ್ಲಿ ಪಾಕಿಸ್ತಾನ ಗೆದ್ದಾಗ ಪಟಾಕಿ ಹೊಡೆಯುವವರನ್ನು ವಿರೋಧ ಮಾಡಿದರೆ ತಪ್ಪೇನು. ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿನ್ನೆಲೆಯಿಂದ ಬಂದವನು. ಸಂಘದಲ್ಲಿ ನಮಗೆ ಸಾಕಷ್ಟು ಶಿಸ್ತು ಕಲಿಸಿದ್ದಾರೆ. ದೇಶದ ಬಗ್ಗೆ, ಹಿರಿಯರ ಬಗ್ಗೆ ಗೌರವ ತೋರುವ ಪಾಠ ಕಲಿಸಿದ್ದಾರೆ. ಹಾಗಾಗಿ ಸಹಜವಾಗಿಯೇ ನಮಗೆ ದೇಶವಿರೋಧಿ ಘೋಷಣೆ ಕೂಗುವವರ ಮೇಲೆ ಕೋಪ ಬರುತ್ತದೆ ಎಂದರು.