ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ತಲೆ ಎತ್ತಿರುವ ಹೋಂ ಸ್ಟೇಗಳ ಮೇಲೆ ಸರ್ಕಾರದ ಹಿಡಿತವೇ ಇಲ್ಲವೇ ಎನ್ನುವ ಅನುಮಾನ ಸೃಷ್ಟಿಯಾಗಿದೆ. ಅಸಲಿಗೆ ಎಷ್ಟಿವೆ ಎನ್ನುವ ಮಾಹಿತಿಯೂ ಸರ್ಕಾರದ ಬಳಿ ಇಲ್ಲದಿರುವುದು ವಿಪರ್ಯಾಸ .
ಮಡಿಕೇರಿ ದುರ್ಘಟನೆ:
ಕಳೆದ ಅಕ್ಟೋಬರ್ 25 ರಂದು ಬಳ್ಳಾರಿಯಿಂದ ಸ್ನೇಹಿತೆಯರ ಜೊತೆ ಕೊಡಗು ಜಿಲ್ಲೆಗೆ ಪ್ರವಾಸಕ್ಕೆ ಬಂದಿದ್ದ ಯುವತಿ ವಿಘ್ನೇಶ್ವರಿ (24) ಮಡಿಕೇರಿಯ ನೋಂದಣಿಯಾಗದ ಹೋಂಸ್ಟೇನಲ್ಲಿ ತಂಗಿದ್ದರು. ಮಡಿಕೇರಿಯ ಡೈರಿ ಫಾರ್ಮ್ ಪ್ರದೇಶದಲ್ಲಿ ಹೋಂ ಸ್ಟೇ ಯನ್ನು ಕಾಯ್ದಿರಿಸಿದ್ದರು. ಸಂಜೆ ಸ್ನಾನ ಗೃಹದ ಗ್ಯಾಸ್ ಗೀಸರ್ ಅನಿಲ ಸೋರಿಕೆಯಿಂದ ಅಸ್ವಸ್ಥರಾದರು. ಸ್ನಾನದ ಕೋಣೆಯಿಂದ ಎಷ್ಟು ಹೊತ್ತಾದರೂ ಬಾರದ ಸ್ನೇಹಿತೆ ಬಗ್ಗೆ ಆತಂಕಗೊಂಡ ಇತರರು ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಅರೆಪ್ರಜ್ಞಾವಸ್ಥೆಯಲ್ಲಿದ್ದ ವಿಘ್ನೇಶ್ವರಿಯನ್ನು ಕಂಡು, ಆಸ್ಪತ್ರೆಗೆ ದಾಖಲಿಸಿದರಾದರೂ ಅವರು ಬದುಕುಳಿಯಲಿಲ್ಲ. ಕೂರ್ಗ್ ವ್ಯಾಲಿ ವ್ಯೂವ್ ಹೋಮ್ ಸ್ಟೇ ಮಾಲೀಕ ದುಬೈ ನಿವಾಸಿಯಾಗಿದ್ದಾರೆ. ಸ್ಥಳೀಯವಾಗಿ ಯಾವುದೇ ಮೂಲಭೂತ ಸೌಕರ್ಯ ಹೋಂ ಸ್ಟೇಗೆ ಇರಲಿಲ್ಲ. ಸ್ನಾನಗೃಹದಲ್ಲಿ ಸೂಕ್ತ ಗಾಳಿ, ಬೆಳಕು ಪ್ರವೇಶಿಸುವ ವ್ಯವಸ್ಥೆಯೂ ಇಲ್ಲದಿರುವುದೇ ಯುವತಿಯ ಸಾವಿಗೆ ಕಾರಣ ಎನ್ನಲಾಗ್ತಿದೆ.
ಈ ರೀತಿಯ ದುರ್ಘಟನೆ ಸಂಭವಿಸಿದ್ದರಿಂದಲೇ ಅದೊಂದು ಅಕ್ರಮ ಹೋಂ ಸ್ಟೇ ಎನ್ನುವ ಮಾಹಿತಿ ಲಭಿಸಿದೆ. ಇದೇ ರೀತಿ ನೂರಾರು ಹೋಂ ಸ್ಟೇಗಳು ಕೊಡಗು, ಚಿಕ್ಕಮಗಳೂರು, ಹಾಸನ, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಕೋಲಾರ, ಚಿಕ್ಕಬಳ್ಳಾಪುರ, ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿಯೂ ಇವೆ. ಇದರ ಲೆಕ್ಕ ಸರ್ಕಾರದ ಬಳಿ ಇಲ್ಲ. ಅಲ್ಲದೇ ಕ್ರಮ ಕೈಗೊಳ್ಳುವ ಕಾರ್ಯವೂ ಇವರ ಮೂಲಕ ಆಗುವುದಿಲ್ಲ.
ನೋಂದಾಯಿತ ಹೋಂ ಸ್ಟೇಗಳೆಷ್ಟು...
ಒಟ್ಟು 1,531 ನೋಂದಾಯಿತ ಹೋಂ ಸ್ಟೇಗಳಿವೆ ಎಂಬ ಮಾಹಿತಿ ಮಾತ್ರ ಸರ್ಕಾರದ ಬಳಿ ಇದೆ. ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಈ ಒಂದು ಉತ್ತರ ಮಾತ್ರ ಸಿಗುತ್ತಿದೆ. ಅಂದ ಹಾಗೆ ಅಕ್ರಮ ಹೋಂಸ್ಟೇಗಳ ಲೆಕ್ಕ ಇವರ ಬಳಿ ಇಲ್ಲ. ಬದಲಾಗಿ ಅದನ್ನು ಆಯಾ ಜಿಲ್ಲಾಡಳಿತವೇ ನೋಡಿಕೊಳ್ಳಲಿದೆ. ಅಕ್ರಮವಾಗಿ ನಿರ್ಮಾಣ ಆಗಿದ್ದರೆ ಅದಕ್ಕೆ ಕ್ರಮ ಕೈಗೊಳ್ಳುವ ಅಧಿಕಾರವನ್ನು ಆಯಾ ಜಿಲ್ಲಾಡಳಿತದ ವ್ಯಾಪ್ತಿಗೆ ನೀಡಿದೆ.
ಮಾರ್ಗಸೂಚಿ:
ಹೊಸದಾಗಿ ಹೋಂಸ್ಟೇ ನಿರ್ಮಿಸುವವರಿಗೆ ಸೂಕ್ತ ಮಾರ್ಗಸೂಚಿ ಸಹ ಸಿದ್ಧಪಡಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದನ್ನು ಮೀರುವವರ ವಿರುದ್ಧ ಕ್ರಮ ಕೈಗೊಳ್ಳುವ ಅವಕಾಶ ಕೂಡ ಇದೆ. ಆದರೆ ಈವರೆಗೂ ಯಾರ ವಿರುದ್ಧವೂ ಇದನ್ನು ಪ್ರಯೋಗಿಸಿಲ್ಲ. ಮಡಿಕೇರಿಯ ಕೂರ್ಗ್ ವ್ಯಾಲಿ ವ್ಯೂವ್ ಹೋಮ್ ಸ್ಟೇ ಮೇಲೂ ಈವರೆಗೂ ಯಾವುದೇ ಕ್ರಮ ಆಗಿರುವ ಬಗ್ಗೆ ಮಾಹಿತಿ ಇಲ್ಲ.
ಜಿಲ್ಲಾವಾರು ಸಕ್ರಮ ಹೋಂಸ್ಟೇಗಳ ಮಾಹಿತಿ:
ಸರ್ಕಾರಿ ಮಾಹಿತಿ ಪ್ರಕಾರ ಜಿಲ್ಲಾವಾರು ಸಕ್ರಮ ಹೋಂಸ್ಟೇಗಳ ಸಂಖ್ಯೆ ಗಮನಿಸಿದರೆ, ಬೆಂಗಳೂರು ನಗರ-5, ಬೆಂಗಳೂರು ಗ್ರಾಮಾಂತರ- 6, ರಾಮನಗರ- 9, ತುಮಕೂರು-2, ಕೋಲಾರ- 5, ಚಿಕ್ಕಬಳ್ಳಾಪುರ-3, ಶಿವಮೊಗ್ಗ- 55, ಬಾಗಲಕೋಟೆ-2, ಧಾರವಾಡ-1, ಹಾವೇರಿ-3, ಉತ್ತರ ಕನ್ನಡ- 157, ಮೈಸೂರು- 8, ಮಂಡ್ಯ-4, ಚಾಮರಾಜನಗರ-8, ಚಿಕ್ಕಮಗಳೂರು- 475, ಕೊಡಗು- 650, ದಕ್ಷಿಣ ಕನ್ನಡ- 32, ಹಾಸನ- 56, ಉಡುಪಿ-55 ಆದರೆ ಚಿತ್ರದುರ್ಗ, ದಾವಣಗೆರೆ, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಬೀದರ್, ಬೆಳಗಾವಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಅಧಿಕೃತ ಹೋಂಸ್ಟೇಗಳೇ ಇಲ್ಲ. ಇದು ಸರ್ಕಾರ ನೀಡುತ್ತಿರುವ ಮಾಹಿತಿ.
ಪ್ರವಾಸೋದ್ಯಮ ಸಚಿವರು ಏನಂತಾರೆ?
ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರೇ ಹೇಳುವಂತೆ, ಯಾವುದೇ ಅಕ್ರಮ ಹೋಂಸ್ಟೇಗಳ ವಿರುದ್ಧ ಸರ್ಕಾರ ನೇರವಾಗಿ ಕ್ರಮ ಕೈಗೊಳ್ಳುವುದಿಲ್ಲ. ಆ ಅಧಿಕಾರವನ್ನು ಜಿಲ್ಲಾಡಳಿತಕ್ಕೆ ನೀಡಲಾಗಿದೆ. ಜಿಲ್ಲಾಧಿಕಾರಿಗಳೇ ಖುದ್ದು ಇಂತವುಗಳ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ. ಅದರ ಮಾಹಿತಿಯನ್ನು ಸರ್ಕಾರಕ್ಕೆ ಒಪ್ಪಿಸುತ್ತಾರೆ. ಅಕ್ರಮ ಹೋಂಸ್ಟೇಗಳಲ್ಲಿ ನಡೆಯುತ್ತಿರುವ ಘಟನೆಗಳು, ಪ್ರವಾಸಿಗರಿಗೆ ಆಗುತ್ತಿರುವ ಸಮಸ್ಯೆ, ಅನಾನುಕೂಲದ ಬಗ್ಗೆ ದೂರುಗಳು ಬಂದರೆ ತಕ್ಷಣ ಪರಿಶೀಲಿಸುತ್ತೇವೆ. ಕಾನೂನು ಕ್ರಮ ಜರುಗಿಸುತ್ತೇವೆ. ಅಕ್ರಮಗಳ ವಿರುದ್ಧ ಹೋರಾಡುವುದು ಕೇವಲ ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಸಾರ್ವಜನಿಕರೂ ಗಮನಕ್ಕೆ ತರಬೇಕು. ಅಂತಹವರ ಮಾಹಿತಿಯನ್ನೂ ನಾವು ಗುಪ್ತವಾಗಿ ಇರಿಸುತ್ತೇವೆ. ಪ್ರವಾಸೋದ್ಯಮ ಇಲಾಖೆ ಅಧಿಕೃತ ವೆಬ್ಸೈಟ್ನಲ್ಲಿ ಎಲ್ಲ ಮಾಹಿತಿ ಇದೆ. ಅದನ್ನು ಪರಿಶೀಲಿಸಬಹುದು ಎಂದಿದ್ದಾರೆ.
ಇದನ್ನೂ ಓದಿ:ಅರಬ್ಬಿ ಸಮುದ್ರದಲ್ಲಿ ಬೋಟ್ ಗೆ ಬೆಂಕಿ; ಏಳು ಮಂದಿ ಮೀನುಗಾರರ ರಕ್ಷಣೆ
ಪ್ರವಾಸೋದ್ಯಮ ನಿಗಮ ಅಧ್ಯಕ್ಷ ಕಾ.ಪು. ಸಿದ್ದಲಿಂಗಸ್ವಾಮಿ ಪ್ರಕಾರ, ಯಾವುದೇ ಅಕ್ರಮ ಹೋಂಸ್ಟೇಗಳ ಕಾರ್ಯ ನಿರ್ವಹಣೆಗೆ ಸರ್ಕಾರ ಅವಕಾಶ ನೀಡಲ್ಲ. ನಮ್ಮ ಗಮನಕ್ಕೆ ಬಂದ ಕಡೆಯೆಲ್ಲ ಕ್ರಮ ಕೈಗೊಳ್ಳುತ್ತೇವೆ. ಜಿಲ್ಲಾಡಳಿತಗಳು ಈ ಬಗ್ಗೆ ಸೂಕ್ತ ನಿಗಾ ವಹಿಸಲಿವೆ. ಸರ್ಕಾರ ಯಾವುದೇ ರೀತಿಯಲ್ಲೂ ಅಕ್ರಮ ಹೋಂಸ್ಟೇಗಳ ಹಿತ ಕಾಪಾಡುವ ಕಾರ್ಯ ಮಾಡಲ್ಲ. ಮುಂದಿನ ದಿನಗಳಲ್ಲಿ ನಾನು ಸಹ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು, ಅಕ್ರಮ ಹೋಂಸ್ಟೇಗಳ ಪತ್ತೆಗೆ ಪ್ರಯತ್ನ ಮಾಡುತ್ತೇನೆ. ಎಷ್ಟೇ ಪ್ರಭಾವಿಗಳಿರಲಿ, ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.