ಬೆಂಗಳೂರು: ರಾಜ್ಯ ಆರೋಗ್ಯ ಇಲಾಖೆಯಲ್ಲಿ ನಿರಂತರವಾಗಿ ನಡೆಯುತ್ತಿವೆ ಎನ್ನಲಾದ ವಿವಿಧ ಅಕ್ರಮಗಳಿಗೆ ಸಂಬಂಧಿಸಿದಂತೆ ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ನಿಷ್ಪಕ್ಷಪಾತ ತನಿಖೆಗೆ ಆದೇಶಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.
ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ಕಾನೂನು ಘಟಕದ ಅಧ್ಯಕ್ಷ ನಂಜಪ್ಪ ಕಾಳೇಗೌಡ, ಆರೋಗ್ಯ ಇಲಾಖೆಯ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ನೇಮಕಾತಿ, ಬಡ್ತಿ ಹಾಗೂ ವರ್ಗಾವಣೆಯಲ್ಲಿ ಭ್ರಷ್ಟಾಚಾರವು ಎಗ್ಗಿಲ್ಲದೇ ನಡೆಯುತ್ತಿದೆ. ಜೊತೆಗೆ ವೈದ್ಯಕೀಯ ಉಪಕರಣಗಳು ಹಾಗೂ ಔಷಧಿಗಳ ಖರೀದಿ, ನಿರ್ಮಾಣ ಕಾಮಗಾರಿ, ಹಾಗೂ ಮೂಲಸೌಕರ್ಯ ಕಲ್ಪಿಸುವುದರಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆಯುತ್ತಿರುವುದಾಗಿ ಆರೋಪಿಸಿದರು.
ವೈದ್ಯಕೀಯ ಮಹಾವಿದ್ಯಾಲಯ, ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಪಡೆಯಲು ರೋಗಿಗಳು ಲಂಚ ನೀಡಬೇಕಾಗಿದೆ. ನಿವೃತ್ತ ಜಿಲ್ಲಾ ವೈದ್ಯಾಧಿಕಾರಿ ಹಾಗೂ ಬಿಜೆಪಿಯ ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿಯವರು ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ವೈದ್ಯಕೀಯ ಉಪಕರಣ ಹಾಗೂ ಔಷಧಿ ಖರೀದಿಯಲ್ಲಿ ಭಾರಿ ಅಕ್ರಮ ನಡೆದಿರುವುದಾಗಿ ಆರೋಪಿಸಿ ಲೋಕಾಯುಕ್ತಕ್ಕೆ 40 ದೂರು ನೀಡಿದ್ದರು. ಈ ಸಂಬಂಧ ತನಿಖೆಯೇ ನಡೆಯದಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.