ಕರ್ನಾಟಕ

karnataka

ETV Bharat / city

ಜಲವ್ಯಾಜ್ಯಗಳ ಕುರಿತು ಚರ್ಚಿಸಲು ಫೆಬ್ರವರಿ ಮೊದಲ ವಾರದಲ್ಲಿ ಸರ್ವಪಕ್ಷ ಸಭೆ : ಸಿಎಂ ಬೊಮ್ಮಾಯಿ - ಫೆಬ್ರವರಿಯಲ್ಲಿ ಸರ್ವಪಕ್ಷ ಸಭೆ

ಮಹಾದಾಯಿ ಯೋಜನೆ ಕುರಿತು ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ಅಂತಿಮ ಹಂತದಲ್ಲಿರುವ ಕಾರಣ ಅಂತಿಮ ವಾದ ಮಂಡನೆ, ತ್ವರಿತ ವಿಚಾರಣೆ ಕುರಿತು ನಿರ್ಧರಿಸಲಾಗಿದೆ. ಸುಪ್ರೀಂಕೋರ್ಟ್​ನಲ್ಲಿ ಬಾಕಿ ಇರುವ ಅಂತಾರಾಜ್ಯ ಜಲ ವಿವಾದಗಳ ಪರಿಹಾರಕ್ಕೆ ಎಲ್ಲ ಪ್ರಯತ್ನ ನಡೆಸಲು ಸಿಎಂ ನಿರ್ಧರಿಸಿದ್ದಾರೆ ಎಂದರು..

basavaraj-bommai
ಸಿಎಂ ಬೊಮ್ಮಾಯಿ

By

Published : Jan 22, 2022, 3:14 PM IST

ಬೆಂಗಳೂರು :ಅಂತಾರಾಜ್ಯ ಜಲ ವ್ಯಾಜ್ಯಗಳಲ್ಲಿ ರಾಜ್ಯ ಸರ್ಕಾರ ಯಾವ ರೀತಿ ಮುಂದುವರೆಯಬೇಕು ಎನ್ನುವ ಕುರಿತು ಫೆಬ್ರವರಿ ಮೊದಲ ವಾರದಲ್ಲಿ ಸರ್ವಪಕ್ಷ ಸಭೆ ಕರೆದು ಚರ್ಚಿಸಿ ನಿರ್ಧರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅಂತಾರಾಜ್ಯ ಜಲ ವಿವಾದಗಳ ಬಗ್ಗೆ ಗೃಹ ಕಚೇರಿ ಕೃಷ್ಣಾದಲ್ಲಿ ವರ್ಚುವಲ್ ಮೂಲಕ ಸಿಎಂ ನಡೆಸುತ್ತಿರುವ ಸಭೆಯಲ್ಲಿ ಸುಪ್ರೀಂಕೋರ್ಟ್​ನಲ್ಲಿ ರಾಜ್ಯದ ಪರ ಹಿರಿಯ ವಕೀಲರಾದ ಮೋಹನ್ ಕಾತರಕಿ, ಶ್ಯಾಂ ದಿವಾನ್ ಸೇರಿ ಹಲವರು, ಸಂಬಂಧಿಸಿದ ಇಲಾಖೆಗಳ ಸಚಿವರು, ಎಜಿ ಪ್ರಭುಲಿಂಗ ನಾವಡಗಿ, ಸಿಎಸ್​ಪಿ ರವಿಕುಮಾರ್ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು, ಜಲಸಂಪನ್ಮೂಲ ಇಲಾಖೆ, ಕಾವೇರಿ ಮತ್ತು ಕರ್ನಾಟಕ ನೀರಾವರಿ ನಿಗಮಗಳು ಹಾಗೂ ಕೃಷ್ಣ ಜಲಭಾಗ್ಯ ನಿಗಮಗಳ ಅಧಿಕಾರಿಗಳು ಭಾಗಿಯಾಗಿದ್ದರು.

ಫೆಬ್ರವರಿ ಮೊದಲ ವಾರ ಸರ್ವಪಕ್ಷ ಸಭೆ :ಸಭೆ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕೃಷ್ಣಾ, ಕಾವೇರಿ ಜಲಾನಯನ ಪ್ರದೇಶಗಳ ಜಲ ವ್ಯಾಜ್ಯ, ಕೋರ್ಟ್​ನಲ್ಲಿರುವ ಯೋಜನೆಗಳ ಕುರಿತು ಸುದೀರ್ಘ ಚರ್ಚೆಯಾಗಿದೆ. ನ್ಯಾಯವಾದಿಗಳು ಕೂಡ ಸಮಗ್ರ ಮಾಹಿತಿ ಕೊಟ್ಟಿದ್ದಾರೆ. ಅದರ ಆಧಾರದಲ್ಲಿ ಜನವರಿ ಅಂತ್ಯದಲ್ಲಿ ಮತ್ತೊಂದು ವಿಡಿಯೋ ಸಂವಾದ ಮಾಡಲಿದ್ದೇವೆ. ಫೆಬ್ರವರಿ ಮೊದಲ ವಾರದಲ್ಲಿ ಸರ್ವಪಕ್ಷ ಸಭೆ ಕತೆಯುತ್ತೇನೆ ಎಂದರು.

ನ್ಯಾಯವಾದಿಗಳು, ಹಿರಿಯ ಸಚಿವರು, ಉಭಯ ಸದನಗಳ ನಾಯಕರನ್ನು ಕರೆದು ಕಾನೂನು ಹೋರಾಟ ಎಲ್ಲಿಯವರಗೆ ನಡೆದಿದೆ. ಕೋರ್ಟ್ ಕೇಸ್ ಎಲ್ಲಿಗೆ ಬಂದಿದೆ. ರಾಜ್ಯ ಯಾವ ರೀತಿಯಲ್ಲಿ ಮುಂದುವರೆಯಬೇಕು ಎಂದು ಚರ್ಚೆ ನಡೆಸಲಾಗುತ್ತದೆ. ನಾವೆಲ್ಲಾ ನೆಲ, ಜಲ ವಿಚಾರದಲ್ಲಿ ಒಂದಾಗಿ ಹೋಗಿದ್ದೇವೆ. ನಾವು ವಿಪಕ್ಷದಲ್ಲಿದ್ದಾಗ ಸಹಕಾರ ಕೊಟ್ಟಿದ್ದೇವೆ. ಈಗ ಅವರ ಸಹಕಾರ ಕೋರುತ್ತಿದ್ದೇವೆ. ಅದಕ್ಕಾಗಿ ಈಗ ಮತ್ತೆ ಸರ್ವಪಕ್ಷ ಸಭೆ ಕರೆದು ಅವರ ಜೊತೆ ಚರ್ಚೆ ನಡೆಸಲಾಗುತ್ತದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಹೊಗೇನಕಲ್​ ಯೋಜನೆ ವಿರುದ್ಧವೂ ಹೋರಾಟ :ಸರ್ಕಾರವಾಗಿ ಹಲವಾರು ಸವಾಲು ಎದುರಿಸಿದ್ದೇವೆ. ಹೊಗೇನಕಲ್ ವಿಷಯದಲ್ಲಿಯೂ ಕೂಡ ಎಲ್ಲ ರೀತಿಯ ಹೋರಾಟ ನಡೆಸಲಿದ್ದೇವೆ. ತಮಿಳುನಾಡಿನ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಕೊಡಬಾರದು. ಇದಕ್ಕಾಗಿ ನಾವು ಕಾನೂನಾತ್ಮಕ, ರಾಜಕೀಯ ಹೋರಾಟ ಮಾಡುತ್ತೇವೆ ಎಂದರು.

ಇದಕ್ಕೂ ಮೊದಲು ಮಾತನಾಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಫೆಬ್ರವರಿ 14ರಂದು ಸುಪ್ರೀಂಕೋರ್ಟ್​ನಲ್ಲಿ ಮೇಕೆದಾಟು ಯೋಜನೆ ಕುರಿತ ಪ್ರಕರಣದ ಅರ್ಜಿ ವಿಚಾರಣೆಗೆ ಬರಲಿದೆ. ಹಾಗಾಗಿ, ಜನವರಿ ಅಂತ್ಯದಲ್ಲಿ ಮತ್ತೊಂದು ಸಭೆ ನಡೆಸಲು ಸಿಎಂ ಸೂಚನೆ ನೀಡಿದ್ದಾರೆ.

ಮಹಾದಾಯಿ ಯೋಜನೆ ಕುರಿತು ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ಅಂತಿಮ ಹಂತದಲ್ಲಿರುವ ಕಾರಣ ಅಂತಿಮ ವಾದ ಮಂಡನೆ, ತ್ವರಿತ ವಿಚಾರಣೆ ಕುರಿತು ನಿರ್ಧರಿಸಲಾಗಿದೆ. ಸುಪ್ರೀಂಕೋರ್ಟ್​ನಲ್ಲಿ ಬಾಕಿ ಇರುವ ಅಂತಾರಾಜ್ಯ ಜಲ ವಿವಾದಗಳ ಪರಿಹಾರಕ್ಕೆ ಎಲ್ಲ ಪ್ರಯತ್ನ ನಡೆಸಲು ಸಿಎಂ ನಿರ್ಧರಿಸಿದ್ದಾರೆ ಎಂದರು.

ಇದನ್ನೂ ಓದಿ:ICMR ಮಾರ್ಗಸೂಚಿಯಂತೆ ಕೋವಿಡ್ ಲಕ್ಷಣ ಇರುವವರಿಗೆ ಮಾತ್ರ ಪರೀಕ್ಷೆ: ಸಚಿವ ಸುಧಾಕರ್

ABOUT THE AUTHOR

...view details