ಬೆಂಗಳೂರು:ಹಿಂದುಳಿದ ವರ್ಗಗಳ ರಾಜಕೀಯ ಹಿಂದುಳಿದಿರುವಿಕೆಯ ಕುರಿತು ಅಧ್ಯಯನ ನಡೆಸಿ ವರದಿ ರೂಪಿಸುವ ಸಲುವಾಗಿ ಆಯೋಗವೊಂದನ್ನು ರಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು ನಡೆದ ಸರ್ವಪಕ್ಷ ಸಭೆಯಲ್ಲಿ ನಿರ್ಧರಿಸಲಾಗಿದೆ. ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ನಡೆದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಸುಪ್ರೀಂಕೋರ್ಟ್‌ನ ತೀರ್ಪಿನಂತೆ ಹಿಂದುಳಿದ ವರ್ಗಗಳ ರಾಜಕೀಯ ಹಿಂದುಳಿದಿರುವಿಕೆ ಬಗ್ಗೆ ವರದಿ ರೂಪಿಸಲು ಆಯೋಗ ರಚಿಸುವ ತೀರ್ಮಾನವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು. ಶೀಘ್ರವೇ ಆಯೋಗವನ್ನು ರಚಿಸಲಾಗುವುದು ಎಂದು ತಿಳಿಸಿದರು.
ಕಾಂತರಾಜು ವರದಿ ಅಪ್ರಸ್ತುತ:ಸುಪ್ರೀಂಕೋರ್ಟ್‌ನಲ್ಲಿ ನಿರ್ದಿಷ್ಟ ಅಂಕಿ-ಅಂಶಗಳನ್ನು ಇಟ್ಟುಕೊಂಡು ರಾಜಕೀಯವಾಗಿ ಹಿಂದುಳಿದಿರುವಿಕೆಯ ಬಗ್ಗೆ ಖಚಿತಪಡಿಸಿಕೊಂಡು, ಹಿಂದುಳಿದ ವರ್ಗದವರಿಗೆ ಚುನಾವಣಾ ಮೀಸಲಾತಿ ನೀಡಬೇಕು ಎಂದು ಹೇಳಿದೆ. ಸಭೆಯ ತೀರ್ಮಾನದಂತೆ, ಶೀಘ್ರವೇ ಆಯೋಗ ರಚನೆ ಮಾಡಲಾಗುವುದು. ಹಿಂದುಳಿದ ವರ್ಗದವರಿಗೆ ಚುನಾವಣಾ ಮೀಸಲಾತಿ ನೀಡದೆ ಚುನಾವಣೆ ನಡೆಸಲು ಸರ್ಕಾರಕ್ಕೆ ಮನಸ್ಸಿಲ್ಲ. ಹಿಂದುಳಿದ ವರ್ಗಗಳಿಗೆ ಚುನಾವಣಾ ಮೀಸಲಾತಿ ಕಲ್ಪಿಸಿಯೇ ಚುನಾವಣೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಡಾ.ಕಾಂತರಾಜು ಅವರ ವರದಿ ಕೇವಲ ಆರ್ಥಿಕ ಮತ್ತು ಸಾಮಾಜಿಕ ಹಿಂದುಳಿದಿರುವಿಕೆ ಬಗ್ಗೆ ಮಾತ್ರ ಬೆಳಕು ಚೆಲ್ಲಿದೆ. ಅದರಲ್ಲಿ ರಾಜಕೀಯ ಹಿಂದುಳಿದಿರುವಿಕೆಯ ಬಗ್ಗೆ ದಾಕಲಾಗಿಲ್ಲ. ಹೀಗಾಗಿ ಆ ವರದಿಯು ಅಪ್ರಸ್ತುತ ಎಂಬ ತೀರ್ಮಾನಕ್ಕೆ ಸಭೆ ಬಂದಿದೆ. ಇದನ್ನು ಎಲ್ಲಾ ಪಕ್ಷಗಳ ಮುಖಂಡರು ಒಪ್ಪಿದ್ದಾರೆ. ರಾಜಕೀಯ ಹಿಂದುಳಿದಿರುವಿಕೆಯನ್ನು ಗುರುತಿಸಲು ಹೊಸ ಆಯೋಗವನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದರು.