ಬೆಂಗಳೂರು:ರಾಜ್ಯ ರಾಜಕೀಯ ಪಕ್ಷಗಳ ಕಣ್ಣು ಮುಂಬರುವ 2023ರ ವಿಧಾನಸಭೆ ಚುನಾವಣೆಯ ಮೇಲಿದೆ. ಮೇಕೆದಾಟು ಪಾದಯಾತ್ರೆ, ಹಿಜಾಬ್ ವಿವಾದ, ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಗೆ ವಿರೋಧ ವ್ಯಕ್ತಪಡಿಸುವ ಮೂಲಕ ಕಾಂಗ್ರೆಸ್ ಈಗಾಗಲೇ ಬಿಜೆಪಿ ಸರ್ಕಾರದ ವಿರುದ್ಧ ಸಮರ ಸಾರಿದೆ. ಅದೇ ರೀತಿಯಾಗಿ ಜೆಡಿಎಸ್ ಕೂಡ ಜನತಾ ಜಲಧಾರೆಯೊಂದಿಗೆ 2023 ರ ವಿಧಾನಸಭೆ ಚುನಾವಣಾ ಹೋರಾಟಕ್ಕೆ ಮುನ್ನುಡಿ ಬರೆಯಲು ಸಜ್ಜಾಗುತ್ತಿದೆ.
ಕಾಂಗ್ರೆಸ್ನ ಮೇಕೆದಾಟು ಪಾದಯಾತ್ರೆ ಆಸುಪಾಸಿನಲ್ಲೇ, ಜೆಡಿಎಸ್ ಜನತಾ ಜಲಧಾರೆ ನಡೆಸಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಕಾಂಗ್ರೆಸ್ ವಿರುದ್ಧ ಬಹಿರಂಗ ಸಮರ ಸಾರಿರುವ ಜೆಡಿಎಸ್, ಜನತಾ ಜಲಧಾರೆಯನ್ನು ಹಿಂದೂ ಸಂಪ್ರದಾಯದಂತೆ ಆಚರಿಸುವ ಮೂಲಕ ಬಿಜೆಪಿಗೂ ಒಳಗೊಳಗೆ ಸೆಡ್ಡು ಹೊಡೆಯಲು ಸಿದ್ದತೆ ಮಾಡಿಕೊಳ್ಳುತ್ತಿದೆ.
ಇಡೀ ಜನತಾ ಜಲಧಾರೆ ಯಾತ್ರೆಗೆ ಹಿಂದೂ ಧಾರ್ಮಿಕ ಸ್ಪರ್ಶ ನೀಡಲಾಗುತ್ತಿದೆ. ಹಿಂದೂ ಸಂಪ್ರದಾಯವನ್ನು ಈ ಸಂದರ್ಭದಲ್ಲಿ ಚಾಚೂ ತಪ್ಪದೆ ಪಾಲಿಸಿ ಬಿಜೆಪಿಯ ಹಿಂದು ಅಜೆಂಡಾಕ್ಕೆ ಪೆಟ್ಟು ಕೊಡುವ ತಂತ್ರಗಾರಿಕೆ ಜೊತೆಗೆ, ಜನತಾ ಜಲಧಾರೆ ಮೂಲಕ ಪಕ್ಷದಲ್ಲಿ ಹೊಸ ಹುಮ್ಮಸ್ಸು, ಉತ್ಸಾಹ ತುಂಬುವ ಯೋಜನೆ ಜೆಡಿಎಸ್ ಹಾಕಿಕೊಂಡಿದೆ.
ತಳ ಹಂತದ ಕಾರ್ಯಕರ್ತರಿಂದ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು ಶಾಸಕರನ್ನು ಒಟ್ಟುಗೂಡಿಸುವುದೇ ಈ ಜಲಧಾರೆ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮೂಲಗಳು ತಿಳಿಸಿವೆ.