ಬೆಂಗಳೂರು: ನಡೆದಾಡುವ ದೇವರೆಂದೇ ಪ್ರಸಿದ್ಧರಾಗಿದ್ದ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ದಿನವನ್ನು 'ದಾಸೋಹ ದಿನ'ವನ್ನಾಗಿ ಘೋಷಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಅಖಿಲ ಭಾರತ ವೀರಶೈವ ಮಹಾಸಭಾ ಮನವಿ ಮಾಡಿದೆ.
12ನೇ ಶತಮಾನದ ಯುಗಪುರುಷ ಕ್ರಾಂತಿಕಾರಿ ಬಸವಣ್ಣನವರ 'ಕಾಯಕವೇ ಕೈಲಾಸ' ಮತ್ತು 'ನಿತ್ಯ ದಾಸೋಹ' ತತ್ವದ ಕೈಂಕರ್ಯದಲ್ಲಿ ಡಾ.ಶಿವಕುಮಾರ ಮಹಾಸ್ವಾಮಿಗಳು ತೊಡಗಿಸಿಕೊಂಡಿದ್ದರು. 1930ರಲ್ಲಿ ಸಿದ್ಧಗಂಗಾ ಮಠದ ಜವಾಬ್ದಾರಿ ಹೊತ್ತು, ಅಂದಿನಿಂದ ನಿರಂತರವಾಗಿ ಮಠ ಯಾವುದೋ ಒಂದು ಧರ್ಮಕ್ಕೆ ಸೀಮಿತವಾಗದೇ ಎಲ್ಲ ಧರ್ಮಗಳ ಮತ್ತು ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದರು. ಲಕ್ಷಾಂತರ ಬಡ ಮಕ್ಕಳಿಗೆ ವಿದ್ಯೆ, ದಾಸೋಹದ ಜೊತೆಗೆ ವಸತಿ ಸೌಕರ್ಯ ಕಲ್ಪಿಸಿ 'ತ್ರಿವಿಧ ದಾಸೋಹಿ'ಗಳಾಗಿದ್ದರು. ಶ್ರೀಗಳು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದು, ಅಪಾರ ಭಕ್ತವೃಂದವನ್ನು ಹೊಂದಿದ್ದರು.
ಶ್ರೀಗಳ ನಿಷ್ಕಲ್ಮಷ ಸೇವೆಯನ್ನು ಪರಿಗಣಿಸಿ, ಕರ್ನಾಟಕ ವಿಶ್ವವಿದ್ಯಾಲಯವು 'ಗೌರವ ಡಾಕ್ಟರೇಟ್' ನೀಡಿತ್ತು. ಪೂಜ್ಯಶ್ರೀಗಳವರ 100ನೇ ವರ್ಷದ ಹುಟ್ಟು ಹಬ್ಬ ಮತ್ತು ಕರ್ನಾಟಕ ಸುವರ್ಣ ಮಹೋತ್ಸವ ಸಮಯದಲ್ಲಿ ಶ್ರೀಗಳ ಜೀವಮಾನ ಸಮಾಜ ಸೇವೆ ಪರಿಗಣಿಸಿ ಕರ್ನಾಟಕ ಸರ್ಕಾರ ರಾಜ್ಯದ ಮಹೋನ್ನತ ಪ್ರಶಸ್ತಿಯಾದ 'ಕರ್ನಾಟಕ ರತ್ನ' ನೀಡಿ ಗೌರವಿಸಿತ್ತು.