ಬೆಂಗಳೂರು:ರಾಜ್ಯದಲ್ಲಿ ಭಾರಿ ತಲ್ಲಣ ಸೃಷ್ಟಿಸಿ ಹಲವಾರು ಮಂದಿಗೆ ದೋಖಾ ಮಾಡಿದ ಪಾಂಜಿ ಪ್ರಕರಣಗಳನ್ನು ಸಿಸಿಬಿಯಿಂದ ರಾಜ್ಯ ಸರ್ಕಾರ ಸಿಐಡಿಗೆ ನೀಡಲು ನಿರ್ಧರಿಸಿದೆ.
ಸಿಸಿಬಿ, ಸೈಬರ್ ಠಾಣೆಗಳಲ್ಲಿ ನಡೆಯುತ್ತಿರುವ ಆ್ಯಂಬಿಡೆಂಟ್, ಇಂಜಾಜ್, ಐಎಂಎ, ಅಜ್ಮೀರಾ ಸೇರಿದಂತೆ ಹನ್ನೆರಡು ಪ್ರಕರಣಗಳ ತನಿಖೆಯನ್ನು ಸಿಐಡಿ ಆರ್ಥಿಕ ಅಪರಾಧ ವಿಭಾಗಕ್ಕೆ ವರ್ಗಾಯಿಸಲು ಎಲ್ಲಾ ಸಿದ್ಧತೆ ಮಾಡಲಾಗಿದೆ.
ಈ ಪಾಂಜಿ ಸ್ಕೀಮ್ಗಳ ಮೂಲಕ ಗ್ರಾಹಕರನ್ನ ಸೆಳೆಯುವ ದೃಷ್ಟಿಯಿಂದ ಆಕರ್ಷಕ ಉದ್ಯಮದ ಕಥೆ ಹೇಳಿ ಲಾಭದ ಆಸೆ ತೋರಿಸಿ ಕೊನೆಗೆ ವಂಚಿಸಿ ಪರಾರಿಯಾಗುತ್ತಾರೆ.
ಇತ್ತೀಚೆಗೆ ಬೆಳಕಿಗೆ ಬಂದ ಪ್ರಕರಣಗಳಲ್ಲಿ ಆ್ಯಂಬಿಡೆಂಟ್, ಐಎಂಎ ಕಂಪನಿಗಳು ಅದೇ ರೀತಿ ಭಾರೀ ಲಾಭದಾಸೆ ತೋರಿಸಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿವೆ. ರಾಜಾಕಾರಣಿಗಳು, ಉದ್ಯಮಿಗಳು ಸೇರಿದಂತೆ ಗಣ್ಯರು ಭಾಗಿಯಾಗಿರುವ ಹಿನ್ನೆಲೆ ಇವುಗಳ ಜಾಲ ಪತ್ತೆ ಹಚ್ಚಲು ಒಂದೇ ಮಾದರಿಯಲ್ಲಿ ತನಿಖೆ ನಡೆಸಲು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ.