ಬೆಂಗಳೂರು:ಕಳೆದ 12 ವರ್ಷಗಳಿಂದ ಸರಿಯಾಗಿ ಬಾಡಿಗೆ ನೀಡದೆ, ಕೊಟ್ಟ ನೋಟಿಸ್‌ಗೂ ಉತ್ತರಿಸದೆ ಉದ್ಧಟತನ ತೋರಿದ ಅಗ್ನಿ ಏರೋ ಸೋರ್ಟ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.
ಬೆಂಗಳೂರಿನ ಜಕ್ಕೂರಿನಲ್ಲಿರುವ ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆವರಣದಲ್ಲಿ ಅಗ್ನಿ ಏರೋ ಸೋರ್ಟ್ಸ್‌ಗೆ ಗುತ್ತಿಗೆ, ಬಾಡಿಗೆ ಆಧಾರದಲ್ಲಿ 80×120 ಅಡಿ ಹಳತೆಯ ಎರಡು ಹ್ಯಾಂಗರ್ ನಿವೇಶನಗಳನ್ನು ನೀಡಲಾಗಿತ್ತು. ಆದರೆ 2008 ರಿಂದ ಈವರೆಗೆ ಸರಿಯಾಗಿ ಬಾಡಿಗೆ ನೀಡದೆ, ಸ್ಥಳವನ್ನು ಒತ್ತುವರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಅಗ್ನಿ ಏರೋ ಸ್ಪೋರ್ಟ್ಸ್ ಅಡ್ವೆಂಚರ್ ಬಾಡಿಗೆ ನೀಡದ ಕಾರಣ ನೋಟಿಸ್ ನೀಡಲಾಗಿತ್ತು. ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ ಸಭೆ ನಡೆಸಿ, ತಕ್ಷಣ ಬಾಡಿಗೆ ವಸೂಲು ಮಾಡಬೇಕು. ಇಲ್ಲವೇ ಆಸ್ತಿ ಮುಟ್ಟುಗೋಲು ಹಾಕಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. 2008 ರಿಂದ ಇದುವರೆಗೆ ಅಗ್ನಿ ಏರೋ ಸ್ಪೋರ್ಟ್ 1,50,55,455 ರೂ. ಬಾಡಿಗೆ ಬಾಕಿ ಹಣ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕಾನೂನುನಾತ್ಮಕವಾಗಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಅಲ್ಲದೆ, ಅಕ್ರಮವಾಗಿ ವೈಮಾನಿಕ ತರಬೇತಿ ಶಾಲೆಯ ನಿವೇಶವನ್ನು ಒತ್ತುವರಿ ಮಾಡಿಕೊಂಡಿದ್ದರು. ಸರ್ವೇ ನಡೆಸಿದ ಅಧಿಕಾರಿಗಳು, 24,143 ಚದರ ಅಡಿ ಜಾಗ ಒತ್ತುವರಿಯಾಗಿರುವುದನ್ನ ಗುರುತಿಸಿದ್ದಾರೆ. ಬಾಡಿಗೆ ಬಾಕಿ ನೀಡುವಂತೆ ಹಾಗೂ ಒತ್ತುವರಿ ತೆರವುಗೊಳಿಸುವಂತೆ ನೋಟಿಸ್ ನೀಡಿದರೂ ಉತ್ತರ ನೀಡಿರಲಿಲ್ಲ.
ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆವರಣದಲ್ಲಿ ಸಕ್ಷಮ ಪ್ರಾಧಿಕಾರಗಳ ಅನುಮತಿ ಪಡೆಯದೆ, ತಮ್ಮ ಸಂಸ್ಥೆಯ ಕಚೇರಿಯನ್ನು ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದರು. ಡಿಜಿಸಿಎ ನಿಯಮ ಉಲ್ಲಂಘಿಸಿ ವಾಣಿಜ್ಯ ಮಾದರಿಯಲ್ಲಿ ಅನಧಿಕೃತವಾಗಿ ಮೈಕ್ರೋಲೈಟ್ ವಿಮಾನಗಳಲ್ಲಿ ಸಾರ್ವಜನಿಕರಿಗೆ ಜಾಲಿ ರೈಡ್ ಆಯೋಜಿಸುತ್ತಿದ್ದರು. ಇದರಿಂದ ವಾರ್ಷಿಕ ಕೋಟ್ಯಾಂತರ ರೂಪಾಯಿ ಆದಾಯ ಗಳಿಸುತ್ತಿದ್ದು, ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಸರ್ಕಾರಿ ವೈಮಾನಿಕ ತರಬೇತಿ ಶಾಲೆ ಆವರಣದೊಳಗೆ ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶ ನೀಡಿದ್ದಾರೆ. ತಮ್ಮ ವಿಮಾನಗಳಲ್ಲಿ ಅಕ್ರಮ ಹಾರಾಟಕ್ಕೆ ಅವಕಾಶ ನೀಡಿ, ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುವ ರೀತಿ ನಡೆದುಕೊಂಡಿದ್ದಾರೆ. ವೈಮಾನಿಕ ಉದ್ದೇಶಕ್ಕೆ ನೀಡಿದ್ದ ಹ್ಯಾಂಗರ್ ಸ್ಥಳಗಳನ್ನು ಅನಧಿಕೃತ ಚಟುವಟಿಕೆಗಳಿಗೆ ಬಳಸಿ ಬಾಡಿಗೆ ಷರತ್ತು ಉಲ್ಲಂಘಿಸಿದ್ದಾರೆ. ಖಾಸಗಿ ವ್ಯಕ್ತಿಗಳ ವಿಮಾನ, ಮೈಕ್ರೋಲೈಟ್, ಪ್ಯಾರಾಮೋಟಾರ್ ಗ್ಲೈಡರ್ ಮತ್ತಿತರ ವೈಮಾನಿಕ ಉಪಕರಣಗಳನ್ನು ತಮ್ಮ ಹ್ಯಾಂಗರ್‌ನಲ್ಲಿ ಇಡಲು ಅವಕಾಶ ಕಲ್ಪಿಸಿ ಖಾಸಗಿ ವ್ಯಾಜ್ಯಗಳಿಗೆ ಅವಕಾಶ ನೀಡಿದ್ದಾರೆ.