ಬೆಂಗಳೂರು: ವಿಧಾನ ಪರಿಷತ್ನಲ್ಲಿ ಇಂದು ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ವಿಧೇಯಕ ಮರುಮಂಡನೆಯಾಯಿತು. ಕಳೆದ ಅಧಿವೇಶನದಲ್ಲಿ ಚರ್ಚೆಯಾಗದೆ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗಿತ್ತು. ಅದನ್ನೇ ಮರು ಪ್ರಸ್ತಾಪಿಸಿ ಚರ್ಚೆ ಆರಂಭಿಸಲಾಯಿತು.
ವಿಧೇಯಕದ ಮೇಲೆ ಮಾತನಾಡಿದ ಸಚಿವ ಆರ್.ಅಶೋಕ್, ಇದೊಂದು ಉತ್ತಮ ವಿಧೇಯಕ. ಈ ಹಿಂದೆ ಇರುವ ವಿಧೇಯಕದಲ್ಲಿ ಒಂದಿಷ್ಟು ತಿದ್ದುಪಡಿ ಮಾಡಿದ್ದೇವೆ. ಸಣ್ಣಪುಟ್ಟ ತಿದ್ದುಪಡಿ ಮಾತ್ರ ಆಗಿದೆ. ಇದರ ಮೇಲೆ ಅಗತ್ಯವಿದ್ದರೆ ಚರ್ಚೆ ನಡೆಯಲಿ. ಎಲ್ಲರ ಅನುಮಾನಗಳಿಗೆ ಸರ್ಕಾರ ಉತ್ತರ ನೀಡಲಿದೆ ಎಂದರು.
ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಮಾತನಾಡಿ, ದೊಡ್ಡ ಮಟ್ಟದ ಭೂಮಿ ಹೊಂದಿರುವವರು ಶೇ. 10ರಷ್ಟು ಮಾತ್ರ ಇದ್ದಾರೆ. ಶೇ. 80ರಷ್ಟು ಮಂದಿ ಸಣ್ಣ ಜಮೀನು ಹೊಂದಿರುವ ರೈತರಿದ್ದಾರೆ. ಈ ವಿಧೇಯಕ ಜಾರಿಗೆ ಬಂದರೆ ಮುಂದಿನ ದಿನಗಳಲ್ಲಿ ಸಣ್ಣ ಜಮೀನುದಾರರ ಬದುಕು ಬೀದಿಗೆ ಬರಲಿದೆ. ಮುಂದಿನ ದಿನಗಳಲ್ಲಿ ರೈತರು ಕೂಲಿ ಕಾರ್ಮಿಕರಾಗುವ ದಿನ ಬರಲಿದೆ. ಮುಂದಿನ ದಿನಗಳಲ್ಲಿ ರೈತಾಪಿ ವರ್ಗದವರು ಬೀದಿಗೆ ಬರುತ್ತಾರೆ. ಕೃಷಿ ಪದ್ಧತಿ ಸಂಪೂರ್ಣ ನಾಶವಾಗಲಿದೆ. ಈ ಕಾಯ್ದೆಯಿಂದ ದೇಶದ ಸಾಮಾಜಿಕ ಚೌಕಟ್ಟು ಸಂಪೂರ್ಣ ನಾಶವಾಗಲಿದೆ. ಇಂತಹ ಕಾಯ್ದೆ ವಾಪಸ್ ಪಡೆಯುವುದು ಉತ್ತಮ. ಸರ್ಕಾರ ರೈತರ ಪರ ಇದೆ ಎಂದರೆ ಇಂತಹ ಕಾಯ್ದೆ ತಿದ್ದುಪಡಿ ವಾಪಸ್ ಪಡೆಯಬೇಕು ಎಂದರು.
ಸದಸ್ಯರಾದ ಪ್ರಕಾಶ್ ರಾಥೋಡ್ ಮಾತನಾಡಿ, ಯಾವುದೇ ಕಾರಣಕ್ಕೂ ವಿಧೇಯಕ ಜಾರಿಗೆ ತರಬಾರದು ಎಂದು ಒತ್ತಾಯಿಸಿದರು. ಇದಕ್ಕೆ ಬೇಸರ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಮಾತನಾಡಿ, ಈ ತಿದ್ದುಪಡಿ ವಿಧೇಯಕ ನೀವು ಮಾಡಿಲ್ಲವೇ? 25 ಎಕರೆಗೆ ಹೆಚ್ಚಿಸಿದ್ದು ಯಾರು ಎಂದು ಕೇಳಿದರು. ಆಗ ಪ್ರಕಾಶ್ ರಾಥೋಡ್ ಮಾತನಾಡಿ, ಆಗ ನೀವೂ ಸರ್ಕಾರದ ಭಾಗವಾಗಿದ್ದವರು. ನೀವೇಕೆ ವಿರೋಧಿಸಲಿಲ್ಲ ಎಂದಾಗ, ಇಬ್ಬರ ನಡುವೆ ವಾಗ್ವಾದ ಶುರುವಾಯಿತು. ಕೂಡಲೇ ಸಭಾಪತಿಗಳು ಮಧ್ಯಪ್ರವೇಶಿಸಿ ಮಾತನಾಡಲು ಜೆಡಿಎಸ್ ಸದಸ್ಯ ಭೋಜೆಗೌಡರನ್ನು ಆಹ್ವಾನಿಸಿದರು.
ಬಳಿಕ ಭೋಜೇಗೌಡ ಮಾತನಾಡಿ, ಕೃಷಿ ಚಟುವಟಿಕೆ ಲಾಭದಾಯಕ ಅನ್ನುವ ಭಾವನೆ ಯುವಕರಲ್ಲಿ ಮೂಡಿಸುವ ಕಾರ್ಯ ಆಗಬೇಕು. ನನ್ನ ಮಗನನ್ನು ಕೃಷಿಗೆ ಉತ್ತೇಜಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಯುವ ಸಮುದಾಯಕ್ಕೆ ಕೃಷಿ ಲಾಭದಾಯಕವಾಗಿಸುವ ಕಾರ್ಯ ಮಾಡಬೇಕು. ಭೂ ಪರಿವರ್ತನೆ ಆದಷ್ಟೂ ಸಮಸ್ಯೆ ಆಗುತ್ತದೆ. ನೈಸ್ ರಸ್ತೆ ಯಾವ ರೀತಿ ಅಕ್ರಮ ಆಗಿದೆ ಎನ್ನುವುದು ನಮ್ಮ ಕಣ್ಣ ಮುಂದಿದೆ. ನೀವು ಹಾಕಿಕೊಂಡ ಮಾನದಂಡದಲ್ಲಿ ಬದಲಾವಣೆ ಆಗಬಾರದು ಎಂದು ಸಲಹೆ ಇತ್ತರು.
ಸಚಿವ ಆರ್.ಅಶೋಕ್ ಮಾತನಾಡಿ, ಯಾವುದೇ ರೀತಿ ಕಾನೂನು ಬದಲಾವಣೆ ಆಗಲ್ಲ. ಕೈಗಾರಿಕೆ ಕಾರಣಕ್ಕೆ ಕೃಷಿ ಭೂಮಿ ಬದಲಿಸಲು ಸಾಧ್ಯವಿಲ್ಲ. ಶಿಕ್ಷಣ, ಎಸ್ಎಸ್ಟಿ ಕಾರಣಕ್ಕೆ ನೀಡಿದ ಭೂಮಿಯನ್ನೂ ಬದಲಿಸಲಾಗದು ಎಂದರು.