ಬೆಂಗಳೂರು: ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಎರಡು ಬಾರಿ ಸುಪ್ರೀಂಕೋರ್ಟ್ ಶಿಫಾರಸು ಮಾಡಿದ್ದರೂ ಕೇಂದ್ರ ಸರ್ಕಾರ ಪರಿಗಣಿಸದ ಕಾರಣ ನ್ಯಾಯಮೂರ್ತಿ ಹುದ್ದೆಗೆ ನೀಡಿದ್ದ ಸಮ್ಮತಿಯನ್ನು ಹೈಕೋರ್ಟ್ನ ಹಿರಿಯ ವಕೀಲ ಆದಿತ್ಯ ಸೋಂಧಿ ಹಿಂಪಡೆದಿದ್ದಾರೆ.
ಸಾಂವಿಧಾನಿಕ ವಿಷಯಗಳಲ್ಲಿ ತಜ್ಞರಾಗಿರುವ ಆದಿತ್ಯ ಸೋಂಧಿ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಸಮ್ಮತಿ ನೀಡಿದ್ದರು. ಈ ಹುದ್ದೆಗೆ ಅರ್ಹರು ಎನಿಸಿದ್ದರಿಂದ ಸುಪ್ರೀಂಕೋರ್ಟ್ ಕೂಡ ಎರಡು ಬಾರಿ ಇವರ ಹೆಸರನ್ನು ಕೇಂದ್ರಕ್ಕೆ ಶಿಫಾರಸು ಮಾಡಿತ್ತು.
ಎರಡನೇ ಬಾರಿ ಶಿಫಾರಸು ಮಾಡಿ 5 ತಿಂಗಳು ಕಳೆದಿದ್ದರೂ ಕೂಡ ಅದನ್ನು ಕೇಂದ್ರ ಪರಿಗಣಿಸದ ಹಿನ್ನೆಲೆಯಲ್ಲಿ ಸಮ್ಮತಿಯನ್ನು ಹಿಂಪಡೆದಿರುವುದಾಗಿ ತಿಳಿಸಿ ಕೊಲಿಜಿಯಂಗೆ ಇದೇ ಫೆಬ್ರವರಿ 4ರಂದು ಪತ್ರ ಬರೆದಿರುವುದಾಗಿ ಸೋಂಧಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
2021ರ ಫೆಬ್ರವರಿ 4ರಂದು ಸುಪ್ರೀಂಕೋರ್ಟ್ ಕೊಲಿಜಿಯಂ ಹಿರಿಯ ನ್ಯಾಯವಾದಿ ಆದಿತ್ಯ ಸೋಂಧಿ, ನ್ಯಾಯಾಂಗ ಅಧಿಕಾರಿಗಳಾದ ರಾಜೇಂದ್ರ ಬಾದಾಮಿಕರ್ ಹಾಗೂ ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರ ಹೆಸರುಗಳನ್ನು ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಿತ್ತು. ಮಾರ್ಚ್ 25ರಂದು ರಾಜೇಂದ್ರ ಬಾದಾಮಿಕರ್ ಮತ್ತು ಮೊಹಿಯುದ್ದೀನ್ ಅವರು ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದಾರೆ. ಕೇಂದ್ರ ಆದಿತ್ಯ ಸೋಂಧಿ ಅವರನ್ನು ಪರಿಗಣಿಸಿರಲಿಲ್ಲ.
ಇದನ್ನೂ ಓದಿ:ಹೈಕೋರ್ಟ್ ಆವರಣದಲ್ಲಿ ಇ-ಸೇವಾ ಕೇಂದ್ರ ಉದ್ಘಾಟಿಸಿದ ಸಿಜೆ ರಿತುರಾಜ್ ಅವಸ್ಥಿ
ಸುಪ್ರೀಂಕೋರ್ಟ್ ಎರಡನೇ ಬಾರಿ ಅಂದರೆ ಸೆಪ್ಟೆಂಬರ್ 1ರಂದು ಸೋಂಧಿ ಅವರ ಹೆಸರನ್ನು ಶಿಫಾರಸು ಮಾಡಿತ್ತು. ಶಿಫಾರಸು ಮಾಡಿ 5 ತಿಂಗಳು ಕಳೆದರೂ ಹೆಸರು ಕೇಂದ್ರ ಪರಿಗಣಿಸದಿರುವುದರಿಂದ ತಮಗೆ ನ್ಯಾಯಮೂರ್ತಿ ಹುದ್ದೆ ಬೇಡವೆಂದು ಕೊಲಿಜಿಯಂಗೆ ಪತ್ರ ಬರೆದಿದ್ದಾರೆ.
ಆದಿತ್ಯ ಸೋಂಧಿ ಹಿನ್ನೆಲೆ:ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ (ಎನ್ಎಲ್ಎಸ್ಯು) ಕಾನೂನು ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಪಿಹೆಚ್ಡಿ ಪಡೆದಿರುವ ಆದಿತ್ಯ ಸೋಂಧಿ 1998ರಿಂದ ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. 2014ರಲ್ಲಿ ಹಿರಿಯ ವಕೀಲರಾಗಿ ಪದೋನ್ನತಿ ಪಡೆದಿರುವ ಇವರು ಇತ್ತೀಚೆಗೆ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ತ್ವರಿತ ವಿಚಾರಣೆಗೆ ಸಂಬಂಧಿಸಿದಂತೆ ಹೈಕೋರ್ಟ್ ನಡೆಸುತ್ತಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಅಮೈಕಸ್ ಕ್ಯೂರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.