ಬೆಂಗಳೂರು: ಜನ್ಮ ನೀಡಿದ ಪೋಷಕರಿಂದ ಮಗು ನೇರವಾಗಿ ದತ್ತು ಪಡೆಯುವುದು ಬಾಲ ನ್ಯಾಯ ಕಾಯ್ದೆಯ ಸೆಕ್ಷನ್ 80ರ ಅಡಿ ಅಪರಾಧವಲ್ಲ ಎಂದು ಹೈಕೋರ್ಟ್ ಧಾರವಾಡ ಪೀಠ ತೀರ್ಪು ನೀಡಿದೆ. ಮಗುವನ್ನು ದತ್ತು ಪಡೆದಿರುವುದನ್ನು ಹಾಗೂ ನೀಡಿರುವುದನ್ನು ಆಕ್ಷೇಪಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ಮಗುವಿಗೆ ಜನ್ಮ ನೀಡಿದ ದಂಪತಿ ಹಾಗೂ ದತ್ತು ಪಡೆದ ದಂಪತಿ ಜಂಟಿಯಾಗಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ಪೀಠ ಈ ತೀರ್ಪು ನೀಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಜನ್ಮ ನೀಡಿದ ಪೋಷಕರಿಂದ ಮಗುವನ್ನು ನೇರವಾಗಿ ದತ್ತು ಪಡೆದುಕೊಳ್ಳುವುದು ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ-2015ರ ಸೆಕ್ಷನ್ 80ರ ಅಡಿ ಅಪರಾಧವಲ್ಲ. ಸೆಕ್ಷನ್ 80ರ ಪ್ರಕಾರ ಅನಾಥ, ಪರಿತ್ಯಕ್ತ ಹಾಗೂ ಬಾಲಮಂದಿರಗಳಿಗೆ ಒಪ್ಪಿಸಿರುವ ಮಗುವನ್ನು ದತ್ತು ಪಡೆಯುವ ವೇಳೆ ನಿಯಮಗಳನ್ನು ಅನುಸರಿಸದೇ ಇದ್ದರೆ ಅಪರಾಧವಾಗುತ್ತದೆ. ಈ ವೇಳೆ, ನಿಯಮಗಳನ್ನು ಉಲ್ಲಂಸಿದರೆ ಶಿಕ್ಷೆ ವಿಧಿಸಬಹುದಾಗಿದೆ. ಆದರೆ, ಈ ಪ್ರಕರಣದಲ್ಲಿ ಮಗು ಕಾಯ್ದೆಯ ಸೆಕ್ಷನ್ 2(1), 2(42), 2(60) ರ ಪ್ರಕಾರ ಅನಾಥ, ಪರಿತ್ಯಕ್ತ ಅಥವಾ ಬಾಲಮಂದಿರಕ್ಕೆ ಒಪ್ಪಿಸಿರುವಂತದ್ದಲ್ಲ. ಮಗುವಿನ ಜನ್ಮದಾತರಿಂದಲೇ ನೇರವಾಗಿ ದತ್ತು ಪಡೆದು ಸಾಕುತ್ತಿರುವುದರಿಂದ ಇವರ ವಿರುದ್ಧ ಸಲ್ಲಿಸಿರುವ ಆರೋಪಪಟ್ಟಿ ಊರ್ಜಿತವಲ್ಲ ಎಂದು ಅಭಿಪ್ರಾಯಪಟ್ಟು, ಗಂಗಾವತಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದ ಪ್ರಕರಣವನ್ನು ರದ್ದುಪಡಿಸಿದೆ.