ಬೆಂಗಳೂರು: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದಿಂದ ಕುರಿಗಾಹಿ ವೃತ್ತಿಯವರನ್ನು ಸರಿಯಾಗಿ ನಡೆಸಿಕೊಂಡಿಲ್ಲ. ಹಾಗಾಗಿ ನಾವು ಜಿನಿವಾದ ಯುನೆಸ್ಕೋ ಸಂಸ್ಥೆಯ ಮುಂದೆ ಕುರುಬರ ಬೇಡಿಕೆಗಳನ್ನು ಮಂಡಿಸಲಿದ್ದೇವೆ ಎಂದು ಶಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗು ಬಿಜೆಪಿ ಎಂಎಲ್ಸಿ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ಸಂಸ್ಥೆ ಜಗತ್ತಿನ ಗಮನ ಸೆಳೆಯಲು ಸಜ್ಜಾಗಿದೆ. ನಾನು ಮತ್ತು ಹೆಚ್ ಎಂ ರೇವಣ್ಣ ಒಳಗೊಂಡ 50 ಜನರ ತಂಡ ಯುರೋಪ್ ಪ್ರವಾಸ ಮಾಡಲಿದ್ದೇವೆ. ಜಿನಿವಾದ ಯುನೆಸ್ಕೋ ಸಂಸ್ಥೆಯ ಮುಂದೆ ಕುರುಬರ ಬೇಡಿಕೆಗಳನ್ನು ಮಂಡಿಸಲಿದ್ದೇವೆ. ಶೆಫರ್ಡ್ಸ್ ಕನ್ವೆನ್ಶನ್ ಮಾಡಿ ಎತ್ನಿಕ್ ಪೀಪಲ್ ಡೆವಲಪ್ಮೆಂಟ್ ಅಥಾರಿಟಿ ಮುಂದೆ ಕುರಿಗಾಹಿಗಳ ಆದಾಯ-ಆರ್ಥಿಕತೆ ಬಗ್ಗೆ ಚರ್ಚೆ ಮಾಡಲಿದ್ದೇವೆ ಎಂದರು.
ಮೊದಲೆಲ್ಲಾ ಅಂತ್ಯೋದಯ ಯೋಜನೆಯಲ್ಲಿ ಕುರಿ, ದನ ಕೊಡುತ್ತಿದ್ದರು. ಈಗ ಅದು ಏನಾಯಿತು ಗೊತ್ತಿಲ್ಲ. ತೆಲಂಗಾಣ ರಾಜ್ಯದಲ್ಲಿ ಮಾತ್ರ ಕುರುಬ ವೃತ್ತಿ, ಕುರುಬರು ಮತ್ತು ಕುರಿ ಸಾಕಾಣಿಕೆಗೆ ಸರ್ಕಾರ ಸ್ಪಂದಿಸಿ ಯೋಜನೆಗಳನ್ನು ರೂಪಿಸಿದೆ. ಅಲ್ಲಿನ ಮುಖ್ಯಮಂತ್ರಿ ಕುರುಬರ ಪರ ಯೋಜನೆ ರೂಪಿಸಿದ್ದಾರೆ. ಆದರೆ ಕರ್ನಾಟಕದಲ್ಲಿ ಈ ಹಿಂದೆ ಕುರುಬರೇ ಸಿಎಂ ಆದರೂ ಅಂತಹ ಯೋಜನೆಗಳನ್ನು ಮಾಡಲಾಗಲಿಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದರು.
50ಜನರ ತಂಡ ಜೂರಿಕ್ ಸಮ್ಮೇಳನಕ್ಕೆ: ಕುರುಬರ ವೃತ್ತಿಯಿಂದ ಬೊಕ್ಕಸಕ್ಕೆ ದೊಡ್ಡ ಆದಾಯವಿದೆ. ಆದರೆ ಸರ್ಕಾರಗಳು ಕುರುಬ, ಉತ್ಪನ್ನ, ಅವನ ಬದುಕು, ಆರ್ಥಿಕತೆ ಬಗ್ಗೆ ಯೋಚನೆ ಮಾಡುತ್ತಿಲ್ಲ. ಹಾಗಾಗಿಯೇ ನಾವು ಕರ್ನಾಟಕ ಚಾಪ್ಟರ್ ಮಾಡುತ್ತಿದ್ದೇವೆ. ವಿಜ್ಞಾನಿಗಳು, ಪಶುಸಂಗೋಪನೆ ತಜ್ಞರು, ವೈಶ್ಯರು, ಯಾದವರು, ಎಲ್ಲರೂ ನಮ್ಮ ನಿಯೋಗದಲ್ಲಿ ಬರಲಿದ್ದಾರೆ. 50 ಜನರ ತಂಡದಲ್ಲಿ ಯೂರೋಪ್ಗೆ ಹೋಗುತ್ತಿದ್ದೇವೆ. ಜೂರಿಕ್ ಪಕ್ಕದಲ್ಲೇ ಸಮ್ಮೇಳನ ಕಾರ್ಯಾಗಾರ ಮಾಡಲಿದ್ದೇವೆ ಎಂದು ವಿಶ್ವನಾಥ್ ತಿಳಿಸಿದರು.
ಇದನ್ನೂ ಓದಿ:ಶೀಘ್ರದಲ್ಲೇ ಲೋಕಾಯುಕ್ತರ ನೇಮಕ ಮಾಡಲಾಗುತ್ತದೆ: ಬಸವರಾಜ ಬೊಮ್ಮಾಯಿ