ಬೆಂಗಳೂರು: ಕರ್ತವ್ಯದಲ್ಲಿರುವ ಪೊಲೀಸರು ಮತ್ತು ಪೊಲೀಸ್ ಠಾಣೆಗಳ ಮೇಲೆ ಪೆಟ್ರೋಲ್ ತುಂಬಿದ ಬಾಟಲಿಗಳನ್ನು ಬಳಸಿ ದಾಳಿ ಮಾಡಿರುವುದು ‘ಭಯೋತ್ಪಾದನಾ ಕೃತ್ಯ’ ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ ಆರೋಪಿಗಳಾಗಿರುವ ಅತೀಕ್ ಅಹ್ಮದ್ ಹಾಗೂ ಇತರ ಆರೋಪಿಗಳು ಜಾಮೀನು ಕೋರಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ತೀರ್ಪಿನಲ್ಲಿ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಉದ್ರಿಕ್ತರುಗಳು ಪೊಲೀಸ್ ಠಾಣೆಯ ಮುಂದೆ ಗುಂಪು ಗೂಡುವುದು, ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯ ಮೇಲೆ ಕಬ್ಬಿಣದ ರಾಡ್, ಪೆಟ್ರೋಲ್ ತುಂಬಿದ ಬಾಟಲ್‌ಗಳು ಸೇರಿದಂತೆ ಮಾರಕಾಸ್ತ್ರಗಳಿಂದ ದಾಳಿ ನಡೆಸುವುದು, ಗಲಭೆ ಉಂಟು ಮಾಡುವುದು ಇವೆಲ್ಲವೂ ಸಾರ್ವಜನಿಕರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಮಾಡಿದ ಭಯೋತ್ಪಾದನಾ ಚಟುವಟಿಕೆಗಳೆನ್ನಿಸುತ್ತವೆ ಎಂದು ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಕೆ. ಸೋಮಶೇಖರ್ ಮತ್ತು ಶಿವಶಂಕರ್ ಅಮರಣ್ಣವರ್ ಅವರ ನೇತೃತ್ವದ ವಿಭಾಗೀಯ ಪೀಠವು ತಿಳಿಸಿದೆ.
ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಪ್ರಕರಣ ಕುರಿತು ಭಾರತೀಯ ತನಿಖಾ ದಳ ಎನ್‌ಐಎ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ ಆರೋಪಿಗಳು ಭಯೋತ್ಪದನಾ ಕೃತ್ಯ ಎಸಗುವ ಉದ್ದೇಶದಿಂದಲೇ ಘಟನಾ ಸ್ಥಳದಲ್ಲಿ ಸೇರಿದ್ದರು ಎಂಬುದು ಮೆಲ್ನೋಟಕ್ಕೆ ಸಾಬೀತಾಗಿರುತ್ತದೆ ಎಂದು ಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಈ ಪ್ರಕರಣದಲ್ಲಿ ಯುಎಪಿಎ ಕಾಯಿದೆ ಸೆಕ್ಷನ್ 43ಡಿ (5) ಅನ್ವಯವಾಗುತ್ತದೆ. ಆರೋಪ ಪಟ್ಟಿಯಲ್ಲಿ ಎನ್‌ಐಎ ಉಲ್ಲೇಖಿಸಿರುವ ಅಂಶಗಳು, ಅರ್ಜಿದಾರರ ವಿರುದ್ಧ ಮಾಡಿರುವ ಆರೋಪಗಳು ಮೇಲ್ನೋಟಕ್ಕೆ ನಿಜ ಎನಿಸುತ್ತಿವೆ ಎಂದು ನ್ಯಾಯಾಲಯ ತಿಳಿಸಿದೆ.