ಬೆಂಗಳೂರು:ಸ್ಯಾಂಡಲ್ವುಡ್ಗೆ ಮಾದಕ ವಸ್ತು ನಂಟು ಆರೋಪ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ತೀವ್ರಗೊಳಿಸಿದ್ದಾರೆ. ಇದರ ಬೆನ್ನಲ್ಲೇ ನಟಿ ರಾಗಿಣಿ ಆಪ್ತ ಶ್ರೀನಿವಾಸ್ ಸುಬ್ರಹ್ಮಣ್ಯನ್ ಅಲಿಯಾಸ್ ಶ್ರೀ ಎಂಬಾತನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಟಿ ರಾಗಿಣಿ ದ್ವಿವೇದಿ ಮತ್ತು ಪೇಜ್ 3 ಪಾರ್ಟಿ ಆಯೋಜಕ ವೈಭವ್ ಜೈನ್ ಆತ್ಮೀಯ ಗೆಳೆಯನಾಗಿರುವ ಶ್ರೀ, ಸಿಸಿಬಿ ಪೊಲೀಸರ ಎದುರು ತನ್ನ ಆತ್ಮೀಯತೆ ಬಗ್ಗೆ ಬಹಳಷ್ಟು ಮಾಹಿತಿ ಬಿಚ್ಚಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಎಲ್ಲಾ ಮಾಹಿತಿಗಳು ರಾಗಿಣಿಗೆ ಮತ್ತಷ್ಟು ಕಂಟಕವಾಗಲಿವೆ. ಸದ್ಯ ರಾಗಿಣಿ ಜಾಮೀನು ಕೋರಿರುವ ಅರ್ಜಿಗೆ ಸಿಸಿಬಿ ಪೊಲೀಸರು ಆಕ್ಷೇಪಣೆ ಸಲ್ಲಿಕೆ ಮಾಡಲು ಮುಂದಾಗಿದ್ದಾರೆ. ಈ ಆಕ್ಷೇಪಣೆ ಅರ್ಜಿಯಲ್ಲಿ ಎಲ್ಲವನ್ನೂ ಪ್ರಸ್ತಾಪ ಮಾಡಲಿದ್ದಾರೆ.
ಶ್ರೀ ಎಂದರೆ ಮೊದಲಿಗೆ ಮಹಿಳೆ ಎಂದು ಭಾವಿಸಿದ್ದ ಸಿಸಿಬಿ ಶಾಕ್ ಆಗಿದೆ. ಬಂಧಿತ ಆರೋಪಿಗಳ ಮೊಬೈಲ್ನಲ್ಲಿ ಶ್ರೀ ಎಂದೇ ಹೆಸರು ನಮೂದಾಗಿತ್ತು. ಆರೋಪಿಗಳೂ ಕೂಡ ಶ್ರೀ ಎಂದೇ ಕರೆಯುತ್ತಿದ್ದರು.
ಸದ್ಯ ತನಿಖಾಧಿಕಾರಿಗಳ ಎದುರು ನಟಿ ರಾಗಿಣಿ ಜೊತೆ ಯಾವ ರೀತಿ ಸಂಪರ್ಕ ಹೊಂದಿದ್ದಾರೆ ಎನ್ನುವ ವಿಚಾರವನ್ನು ಶ್ರೀ ಬಾಯಿಬಿಟ್ಟಿದ್ದಾನೆ. ಲಾಕ್ಡೌನ್ ವೇಳೆ ಕೂಡ ಶ್ರೀ ನಟಿ ರಾಗಿಣಿಯ ಫ್ಲಾಟ್ಗೆ ಆಗಾಗ ತೆರಳಿ ಭೇಟಿಯಾಗಿ ಬರುತ್ತಿದ್ದನಂತೆ. ಹೀಗಾಗಿ ಭೇಟಿಯ ಉದ್ದೇಶವೇನು ಎಂಬುದರ ಮಾಹಿತಿಯನ್ನು ಅಧಿಕಾರಿಗಳು ಕಲೆಹಾಕಿದ್ದು, ಸಿಸಿಟಿವಿಯಲ್ಲೂ ದೃಶ್ಯಗಳು ದಾಖಲಾಗಿವೆ.
ಅಷ್ಟು ಮಾತ್ರವಲ್ಲದೆ ಈತ ನಟ ಸಂತೋಷ್ ಕುಮಾರ್ ಹಾಗೂ ಕಾರ್ಯಕ್ರಮ ನಿರೂಪಕ ಅಕುಲ್ ಬಾಲಾಜಿಯ ರೆಸಾರ್ಟ್ಗಳನ್ನ ಬಾಡಿಗೆ ಪಡೆದು ವೀಕೆಂಡ್ ಹೋಮ್ ಎಂದು ಪಾರ್ಟಿ ಮಾಡಿ ಡ್ರಗ್ಸ್ ಸೇವನೆ ಮಾಡಲಾಗುತ್ತಿತ್ತಂತೆ. ಈ ಪಾರ್ಟಿಯಲ್ಲಿ ನಟಿ ರಾಗಿಣಿ ಹಾಗೂ ಆಪ್ತರು ಭಾಗಿಯಾಗಿದ್ದಾರೆ ಎನ್ನಲಾಗಿದೆ.
ಸದ್ಯ ನಟ ಸಂತೋಷ್ ಕುಮಾರ್ ಹಾಗೂ ಅಕುಲ್ ಬಾಲಾಜಿಯಿಂದ ಈತನ ಮಾಹಿತಿಯನ್ನ ಬಹಳಷ್ಟು ಕಲೆಹಾಕಲಾಗಿದೆ. ಸದ್ಯ ಸಿಸಿಬಿ ವಶದಲ್ಲಿರುವ ಶ್ರೀನಿಂದ ಇನ್ನಷ್ಟು ಮಾಹಿತಿ ಕಲೆಹಾಕಿ ಈತನ ಜೊತೆ ಸಂಪರ್ಕ ಇರುವವರಿಗೆ ನೋಟಿಸ್ ಕೊಡಲು ನಿರ್ಧಾರ ಮಾಡಿದ್ದಾರೆ.